ಡೆಲ್ಲಿ ಗೆಲುವಿಗೆ ಕಠಿಣ ಸವಾಲು ನೀಡಿದ ಕೋಲ್ಕತಾ
ಹೊಸದಿಲ್ಲಿ, ಮಾ.30: ಆಲ್‌ರೌಂಡರ್ ಆ್ಯಂಡ್ರೆ ರಸೆಲ್(62,28 ಎಸೆತ)ಅಬ್ಬರದ ಆಟ ಹಾಗೂ ನಾಯಕ ದಿನೇಶ್ ಕಾರ್ತಿಕ್ ಅರ್ಧಶತಕ(50)ಸಹಾಯದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಐಪಿಎಲ್‌ನ 10ನೇ ಪಂದ್ಯ ಗೆಲ್ಲಲು 186 ರನ್ ಗುರಿ ನೀಡಿದೆ.
ಶನಿವಾರ ಇಲ್ಲಿ ಟಾಸ್ ಜಯಿಸಿದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕೆಕೆಆರ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. 10 ಓವರ್‌ನೊಳಗೆ 61 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡ ಹೊರತಾಗಿಯೂ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್ ಕಲೆ ಹಾಕಿತು. ಕೋಲ್ಕತಾ 44 ರನ್‌ಗೆ ಅಗ್ರ ಐವರು ದಾಂಡಿಗರನ್ನು ಕಳೆದುಕೊಂಡಾಗ ಜೊತೆಯಾದ ನಾಯಕ ಕಾರ್ತಿಕ್(50,36 ಎಸೆತ,5 ಬೌಂಡರಿ, 2 ಸಿಕ್ಸರ್) ಹಾಗೂ ರಸೆಲ್(62,28 ಎಸೆತ, 4 ಬೌಂಡರಿ, 6 ಸಿಕ್ಸರ್)ಆರನೇ ವಿಕೆಟ್‌ಗೆ 95 ರನ್ ಸೇರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಎರಡಂಕೆಯ ಸ್ಕೋರ್ ಗಳಿಸಿದ ಪಿಯೂಷ್ ಚಾವ್ಲಾ(12) ಹಾಗೂ ಕುಲದೀಪ್ ಯಾದವ್(ಔಟಾಗದೆ 10)ತಂಡ 185 ರನ್ ಗಳಿಸಲು ನೆರವಾದರು.
ಡೆಲ್ಲಿ ಪರ ಹರ್ಷಲ್ ಪಟೇಲ್(2-40) ಯಶಸ್ವಿ ಬೌಲರ್ ಎನಿಸಿಕೊಂಡರು.
►ಡೆಲ್ಲಿ 152/2: ಗೆಲುವಿಗೆ ಸವಾಲಿನ ಮೊತ್ತ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 16 ಓವರ್ ಅಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 152 ರನ್ ಗಳಿಸಿ ಗೆಲುವಿನ ಹಾದಿಯಲ್ಲಿದೆ. 24 ಎಸೆತಗಳಲ್ಲಿ ಇನ್ನೂ 34 ರನ್ ಗಳಿಸಬೇಕಾಗಿದೆ. ಆರಂಭಿಕ ಆಟಗಾರ ಪೃಥ್ವಿ ಶಾ(ಔಟಾಗದೆ 82, 47 ಎಸೆತ, 9 ಬೌಂಡರಿ, 3 ಸಿಕ್ಸರ್) ಹಾಗೂ ರಿಷಭ್ ಪಂತ್(8) ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ 43 ರನ್ ಗಳಿಸಿ ಔಟಾಗಿದ್ದಾರೆ.







