ವರ್ಷದ ಮೊದಲ 3 ತಿಂಗಳ ಆದಾಯದಲ್ಲಿ ಸೈನಾಗೆ 2ನೇ ಸ್ಥಾನ
ಹೊಸದಿಲ್ಲಿ, ಮಾ.30: ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಹೊಸ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಗರಿಷ್ಠ ಆದಾಯ ಗಳಿಸಿದ ಬ್ಯಾಡ್ಮಿಂಟನ್ ಸಿಂಗಲ್ಸ್ ಆಟಗಾರ್ತಿಯರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಹೈದರಾಬಾದ್‌ನ 28ರ ಹರೆಯದ ಸೈನಾ ಈ ವರ್ಷ ಇಂಡೋನೇಶ್ಯಾ ಮಾಸ್ಟರ್ಸ್ ಪ್ರಶಸ್ತಿ ಜಯಿಸಿದ್ದರು. ಮಲೇಶ್ಯಾ ಮಾಸ್ಟರ್ಸ್‌ನಲ್ಲಿ ಸೆಮಿ ಫೈನಲ್ ಹಾಗೂ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಈ ಮೂಲಕ ಒಟ್ಟು 36,825 ಅಮೆರಿಕನ್ ಡಾಲರ್ ಆದಾಯ ಗಳಿಸಿದ್ದಾರೆ. ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್, ಚೀನಾದ ಚೆನ್ ಯುಫೈ ಗರಿಷ್ಠ ಆದಾಯ ಗಳಿಸಿರುವ ಮಹಿಳೆಯರ ಸಿಂಗಲ್ಸ್ ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಚೆನ್ ಒಟ್ಟು 86,325 ಯುಎಸ್ ಡಾಲರ್ ಆದಾಯ ಗಳಿಸಿದ್ದಾರೆ. ಚೈನೀಸ್ ತೈಪೆಯ ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್ 36,100 ಯುಎಸ್ ಡಾಲರ್ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ.
Next Story





