ವಯನಾಡ್ ನಿಂದ ರಾಹುಲ್ ಗಾಂಧಿ ಸ್ಪರ್ಧೆ

ಹೊಸದಿಲ್ಲಿ, ಮಾ.31: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರಪ್ರದೇಶದ ಅಮೇಠಿಯ ಜೊತೆಗೆ ಕೇರಳದ ವಯನಾಡ್ ಕ್ಷೇತ್ರದಲ್ಲೂ ಸ್ಪರ್ಧಿಸಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಕೆ ಆ್ಯಂಟನಿ ಘೋಷಿಸಿದ್ದಾರೆ.
ಇದೇ ಪ್ರಥಮ ಬಾರಿಗೆ ರಾಹುಲ್ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ 1999ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಕಣಕ್ಕಿಳಿದಿದ್ದು, ಬಳ್ಳಾರಿಯಲ್ಲಿ ತಮ್ಮ ಎದುರಾಳಿಯಾಗಿದ್ದ ಬಿಜೆಪಿಯ ಸುಷ್ಮಾ ಸ್ವರಾಜ್‌ರನ್ನು ಸೋಲಿಸಿದ್ದರು. 1980ರಲ್ಲಿ ರಾಹುಲ್ ಅಜ್ಜಿ ಇಂದಿರಾಗಾಂಧಿ ರಾಯ್‌ಬರೇಲಿ ಮತ್ತು ಮೇಡಕ್ (ಈಗ ತೆಲಂಗಾಣದಲ್ಲಿದೆ) ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು.
ತಮ್ಮ ಕುಟುಂಬದ ಭದ್ರಕೋಟೆ ಎನಿಸಿರುವ ಅಮೇಠಿ ಕ್ಷೇತ್ರವನ್ನು ರಾಹುಲ್ 2004ರಿಂದಲೂ ಪ್ರತಿನಿಧಿಸುತ್ತಿದ್ದಾರೆ. ಆದರೆ 2014ರಲ್ಲಿ ಅವರ ಗೆಲುವಿನ ಅಂತರದಲ್ಲಿ ಗಮನಾರ್ಹ ಇಳಿಕೆಯಾಗಿತ್ತು. 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಮೇಠಿ ಸಂಸತ್ ಕ್ಷೇತ್ರ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಸೋಲುಂಡಿದೆ.
ಅಮೇಠಿಯ ಜೊತೆ ವಯನಾಡ್‌ನಲ್ಲೂ ರಾಹುಲ್ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಠಿಯು ರಾಹುಲ್‌ರನ್ನು ದೂರಕ್ಕೆ ಓಡಿಸಿಬಿಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ. ಸ್ಮತಿ ಅಮೇಠಿಯಲ್ಲಿ ರಾಹುಲ್ ವಿರುದ್ಧ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸ್ಮತಿ ಸೋಲುಂಡಿದ್ದರು.
ರಾಹುಲ್ ದಕ್ಷಿಣ ಭಾರತದಿಂದ ಸ್ಪರ್ಧಿಸುವ ನಿರ್ಧಾರವನ್ನು ಕಳೆದ ವಾರ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿ ದಕ್ಷಿಣದಲ್ಲಿ ಸ್ಪರ್ಧಿಸಿದರೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸ್ಫೂರ್ತಿ ದೊರೆಯುವುದಾಗಿ ಪಕ್ಷದ ದಕ್ಷಿಣ ಭಾರತದ ಮುಖಂಡರು ಅಭಿಪ್ರಾಯಪಟ್ಟರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಮಧ್ಯೆ ತೀವ್ರ ಒಡಕು ಹುಟ್ಟಿಸಲು ಪ್ರಯತ್ನಿಸಿದ್ದರು. ಆದರೆ ದಕ್ಷಿಣ ಭಾರತವೂ ದೇಶದ ಪ್ರಮುಖ ಭಾಗ ಎಂಬುದನ್ನು ಅವರಿಗೆ ನೆನಪಿಸಿಕೊಡಲು ರಾಹುಲ್ ದಕ್ಷಿಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ರಾಹುಲ್‌ಗೆ ಸ್ಪರ್ಧಿಸಲು ಆಹ್ವಾನ ದೊರಕಿತ್ತು. ಅಂತಿಮವಾಗಿ ಕೇರಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.







