ಎಲ್ಲರೂ ಮೋದಿ ಪರವಾಗಿ ಮತ ಯಾಚನೆ ಮಾಡಿ: ಯಡಿಯೂರಪ್ಪ

ಬೆಂಗಳೂರು, ಮಾ.31: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಲೋಕಸಭೆ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅವರಿಗೆ ಮಂಡ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರವಿವಾರ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ರೂಪೇನ ಅಗ್ರಹಾರದಲ್ಲಿ ಆಯೋಜಿಸಿದ್ದ ಮಹಿಳಾ ಕಾರ್ಯಕರ್ತರ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಜನಪ್ರಿಯತೆಯನ್ನು ಸಹಿಸಲಾಗದೇ ಕುಮಾರಸ್ವಾಮಿ ಕುತಂತ್ರದಿಂದ ಸುಮಲತಾ ಎನ್ನುವ ಹೆಸರಿನ ಮೂರ್ನಾಲ್ಕು ಮಹಿಳೆಯರಿಂದ ನಾಮಪತ್ರ ಹಾಕಿಸಿ ಮಂಡ್ಯದ ಮತದಾರರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಮಂಡ್ಯದ ಜನರು ದಡ್ಡರಲ್ಲ. ಕುಮಾರಸಾವ್ವಿುಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.
ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಯುವಕನಾಗಿದ್ದು, ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಇದೀಗ ಅವರು ದಿವಂಗತ ಅನಂತಕುಮಾರ್ ಸ್ಥಾನದಲ್ಲಿ ನಿಂತಿದ್ದಾರೆ. ಅವರು ಅನಂತಕುಮಾರ್ ಅವರಿಗಿಂತ ಅಧಿಕ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನೀವು ಮೋದಿಗೆ ಮತ ಹಾಕಿದರೆ ಯಡಿಯೂರಪ್ಪಗೆ ಮತ ಹಾಕಿದಂತೆ, ಯಡಿಯೂರಪ್ಪಗೆ ಮತ ಚಲಾಯಿಸಿದರೆ ತೇಜಸ್ವಿ ಸೂರ್ಯಗೆ ಮತ ಹಾಕಿದಂತೆ ಎಂದು ಹೇಳಿದ ಯಡಿಯೂರಪ್ಪ, ನಮಗೆ ಮೋದಿ ಅವರೇ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಎಲ್ಲರೂ ಮೋದಿ ಪರವಾಗಿ ಮತ ಯಾಚನೆ ಮಾಡಬೇಕೆಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ‘ನಮಗೆ ಅನಂತಕುಮಾರ್ ಅವರ ಅಗಲಿಕೆ ನೋವನ್ನು ಸಹಿಸಿಕೊಳ್ಳಲು ಈಗಲೂ ಸಾಧ್ಯವಾಗಿಲ್ಲ. ನಮ್ಮ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪಎಂದು ತಿಳಿದುಕೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದರು.
ಮೋದಿ ಮತ್ತು ಯಡಿಯೂರಪ್ಪ ನಮ್ಮ ಪಕ್ಷದ ಜೋಡೆತ್ತುಗಳಿದ್ದಂತೆ. ಕಳೆದ ಬಾರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅನಂತಕುಮಾರ್ ಅವರಿಗೆ 60 ಸಾವಿರ ಮತಗಳ ಲೀಡ್ ಕೊಟ್ಟಿದ್ದೆವು. ಈಗ ನಮ್ಮ ಪಕ್ಷದ ಅಭ್ಯರ್ಥಿಗೆ ಅದಕ್ಕಿಂತ ಹೆಚ್ಚು ಲೀಡ್ ಕೊಡುತ್ತೇವೆ ಎಂದು ಅವರು ಹೇಳಿದರು.
ಎಪ್ರಿಲ್ 2 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬನಶಂಕರಿಯಲ್ಲಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ.
ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ಗೆ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಸ್ಥಾನ ಸಿಗಬೇಕೆಂದು ಸತೀಶ್ ರೆಡ್ಡಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.
ಬಿಬಿಎಂಪಿ ಸದಸ್ಯ ರಾಮ್ ಮೋಹನ್ ರಾಜ್ ಸೇರಿದಂತೆ ಸ್ಥಳೀಯ ಬಿಜೆಪಿಯ ಅನೇಕ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.







