ಮೈತ್ರಿ ಧರ್ಮ ಪಾಲಿಸಿ, ಇಲ್ಲವೇ ಪಕ್ಷ ತೊರೆಯಿರಿ: ಡಿ.ಕೆ.ಶಿವಕುಮಾರ್

ಶಿವಮೊಗ್ಗ, ಮಾ. 31: ಭಿನ್ನಾಭಿಪ್ರಾಯ ತೊರೆಯಬೇಕು. ಮೈತ್ರಿ ಧರ್ಮ ಪಾಲಿಸಬೇಕು. ಇಲ್ಲದಿದ್ದರೆ ದಯಮಾಡಿ ಪಕ್ಷ ಬಿಟ್ಟು ಹೋಗಿ. ವಿನಾ ಕಾರಣ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಬೇಡಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಖಡಕ್ ಸಂದೇಶ ನೀಡಿದ್ದಾರೆ.
ರವಿವಾರ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಕಾರ್ಯಕರ್ತರ ಜಂಟಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೈತ್ರಿ ಪಕ್ಷಗಳಲ್ಲಿ ಯಾವುದೇ ಗೊಂದಲವಿಲ್ಲ. ಜಿಲ್ಲೆಯ ಉಭಯ ಪಕ್ಷಗಳ ನಾಯಕರುಗಳೆಲ್ಲ, ಒಟ್ಟಾಗಿ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪರ ಗೆಲುವಿಗೆ ಶ್ರಮಿಸಬೇಕು. ಕಾರ್ಯಕರ್ತರೇ ನಮ್ಮ ಶಕ್ತಿಯಾಗಿದ್ದಾರೆ. ಮೈತ್ರಿ ಧರ್ಮದಂತೆ ಎರಡು ಪಕ್ಷದ ಕಾರ್ಯಕರ್ತರು, ಜಂಟಿಯಾಗಿ ಅಭ್ಯರ್ಥಿ ಪರ ಮತಯಾಚಿಸಬೇಕು ಎಂದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ಗೌರವ, ನಂಬಿಕೆ ಇರುವವರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮಧು ಬಂಗಾರಪ್ಪರನ್ನು ಸಂಸತ್‍ಗೆ ಕಳುಹಿಸಿಕೊಡುವ ಜವಾಬ್ದಾರಿ ನಿಮ್ಮದಾಗಿದೆ ಎಂದರು.
ಜನಪ್ರತಿನಿಧಿಗಳು ಪ್ರಜಾಪ್ರಭುತ್ವದಲ್ಲಿ ಮತದಾರರ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಆದರೆ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರರವರು, ಪಾರ್ಲಿಮೆಂಟಿಗೆ ಹೋಗಿ ಯಾವ ಕೆಲಸವೂ ಮಾಡಲಿಲ್ಲ. ಕೇಂದ್ರ ಸರಕಾರ ಅಡಕೆ ಬೆಳೆಗಾರರ ವಿರುದ್ದ ಸುಪ್ರೀಂ ಕೋರ್ಟ್‍ನಲ್ಲಿ ಅಫಿಡವಿಟ್ ಸಲ್ಲಿಸಿದಾಗ, ಅಡಕೆ ಕ್ಯಾನ್ಸರ್ ಕಾರಕವಲ್ಲ ಎಂದು ಧ್ವನಿ ಎತ್ತಲಿಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿ: ಶಿವಮೊಗ್ಗ ನಗರದಲ್ಲಿ ರವಿವಾರ ಬೆಳಿಗ್ಗೆ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಆಶೀರ್ವಾದ ಪಡೆಯಲು ಭಾಗ್ಯಬೇಕು. ಬಿ.ವೈ.ರಾಘವೇಂದ್ರಗೆ ಆ ಭಾಗ್ಯವಿಲ್ಲ. ಅವರ ತಂದೆ (ಬಿ.ಎಸ್.ಯಡಿಯೂರಪ್ಪ) ಯ ಆಶೀರ್ವಾದ ಪಡೆಯದೆ, ನಾಮಪತ್ರ ಸಲ್ಲಿಸಿರುವುದು ಅಶುಭ ಸೂಚನೆಯ ಸಂಕೇತವಾಗಿದೆ. ಇದೇ ಸೋಲಿನ ಪ್ರಥಮ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಕಳೆದ 5 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಉದ್ಯೋಗ ಸೃಜಿಸುವ ಕೆಲಸವಾಗಿಲ್ಲ. ನಿರುದ್ಯೋಗ ಹೆಚ್ಚಾಗಿದೆ. ಸರ್ಕಾರಿ ಉದ್ಯೋಗವಿರಲಿ, ಖಾಸಗಿ ಕ್ಷೇತ್ರಗಳಲ್ಲಿಯೂ ಉದ್ಯೋಗವಿಲ್ಲವಾಗಿದೆ. ಎಂಜಿನಿಯರ್, ವೈದ್ಯಕೀಯ ಪದವೀಧರರು ಕೆಲವೇ ಸಾವಿರ ರೂ.ಗಳಿಗೆ ಕಾಲ್ ಸೆಂಟರ್‍ಗಳಲ್ಲಿ ಕೆಲಸ ಮಾಡುವಂತಾಗಿದೆ. ಇದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪರಿಗೆ ರೆಸ್ಟ್ ಅಗತ್ಯವಿದೆ. ಈ ಬಾರಿ ಅವರಿಗೆ ಕ್ಷೇತ್ರದ ಮತದಾರರು ರೆಸ್ಟ್ ನೀಡಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಹೇಳಿದ ಅವರು, 'ತೇಜಸ್ವಿನಿ ಅನಂತ್‍ಕುಮಾರ್ ಗೆ ಏಕೆ ಟಿಕೆಟ್ ತಪ್ಪಿತು? ಯಡಿಯೂರಪ್ಪ ದ್ವೇಷ ಸಾಧಿಸುವಲ್ಲಿ ಯಶಸ್ವಿಯಾದರೆ? ತೇಜಸ್ವಿನಿ ಅವರ ಸೇವೆ ಬಿಜೆಪಿ ನಾಯಕತ್ವಕ್ಕೆ ಹಿಡಿಸಲಿಲ್ಲವೆ? ಎಂಬುದರ ಬಗ್ಗೆ ತಿಳಿಯುವ ಕುತೂಹಲ ಜನರೂ ಸೇರಿದಂತೆ ತಮಗೂ ಇದೆ' ಎಂದರು.
ಐಟಿ ದಾಳಿ ಉದ್ಯಮಿಗಳ ಮೇಲೆ ಆಗಿದೆಯೇ ಹೊರತು, ಜನಪ್ರತಿನಿಧಿಗಳ ಮೇಲೆ ಆಗಿಲ್ಲ ಎಂದು ಯಡಿಯೂರಪ್ಪ ಹೇಳುತ್ತಾರೆ. ಅವರೇನು ಐ.ಟಿ. ವಕ್ತಾರರೇ? ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ಪಕ್ಷದ ನಾಯಕರ ಮೇಲೆ ಐ.ಟಿ. ದಾಳಿಯಾಗಿಲ್ಲ. ಕೇಂದ್ರ ಸರ್ಕಾರವು ಸ್ವಾಯತ್ತ ಸಂಸ್ಥೆಯನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ದೂರಿದರು.
ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ನಾಯಕರು!
ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್‍ರವರು ಜೆಡಿಎಸ್ ಮುಖಂಡ ಆರ್.ಎಂ.ಮಂಜುನಾಥಗೌಡ ಜೊತೆ ಯಾವುದೇ ಕಾರಣಕ್ಕೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆ ಗುಡುಗಿದ್ದರು. ಹಾಗೆಯೇ ಅವರಿಬ್ಬರು ಮೈತ್ರಿ ಪಕ್ಷಗಳ ಸಭೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ತೀರ್ಥಹಳ್ಳಿ ಪಟ್ಟಣದಲ್ಲಿ ರವಿವಾರ ಸಚಿವ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದ ಮೈತ್ರಿಕೂಟದ ಕಾರ್ಯಕರ್ತರ ಸಭೆಯಲ್ಲಿ ಈ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.







