ನಾನು ತಾರತಮ್ಯ ಮಾಡಿದ್ದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಬಿಜೆಪಿ ಅಭ್ಯರ್ಥಿ ಸದಾನಂದಗೌಡ ಸವಾಲು

ಬೆಂಗಳೂರು, ಮಾ. 31: ಜಾತಿ, ಧರ್ಮದ ಆಧಾರದಲ್ಲಿ ನಾನು ಯಾವುದೇ ತಾರತಮ್ಯ ಮಾಡಿಲ್ಲ. ಇದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಸವಾಲು ಹಾಕಿದ್ದಾರೆ.
ರವಿವಾರ ಯಶವಂತಪುರದ ಮೆವಾರ್ ಭವನದಲ್ಲಿ ಏರ್ಪಡಿಸಿದ್ದ ಅಲ್ಪಸಂಖ್ಯಾತ ಸಮುದಾಯದ ಪದಾಧಿಕಾರಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಯಾವುದೇ ಕೋಮುಗಲಭೆ ನಡೆದಿವೆಯೇ?. ಅಲ್ಪಸಂಖ್ಯಾತರಿಗೆ ತೊಂದರೆ ನೀಡಲಾಗಿದೆಯೇ?. ನನ್ನ ಧರ್ಮಕ್ಕೆ ಕೊಟ್ಟ ಗೌರವವನ್ನು ಇತರ ಧರ್ಮಗಳಿಗೂ ಕೊಟ್ಟಿದ್ದೇನೆ ಎಂದರು.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಬಂಗಾಳಕೊಲ್ಲಿ ಅಥವಾ ಅರಬ್ಬಿ ಸಮುದ್ರಕ್ಕೆ ಬಿಸಾಡುತ್ತಾರೆಂದು ಕೆಲವರು ಟೀಕಿಸಿದ್ದರು. ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಯಾರನ್ನಾದರೂ ಬಿಸಾಡಿದೆಯೇ ಎಂದು ಸದಾನಂದಗೌಡ ಇದೇ ವೇಳೆ ಪ್ರಶ್ನಿಸಿದರು.
ಯುವಕರ ಬಿಡುಗಡೆ: ಭಯೋತ್ಪಾದಕ ಪಟ್ಟ ಕಟ್ಟಿದ್ದ 642 ಮುಸ್ಲಿಮ್ ಯುವಕರನ್ನು ಪ್ರಧಾನಿ ಮೋದಿ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಮೂರು ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ಕೇಂದ್ರದ ಮಾಜಿ ಸಚಿವ ಎಂಜೆ.ಅಕ್ಬರ್ ನನಗೆ ತಿಳಿಸಿದರು ಎಂದರು.
ನಾನು ಮುಂದಿನ ಜನ್ಮದಲ್ಲಿ ಕ್ರೈಸ್ತ ಅಥವಾ ಮುಸ್ಲಿಂ ಆಗಿ ಹುಟ್ಟಬೇಕಿಲ್ಲ. ಈ ಜನ್ಮದಲ್ಲೇ ಎಲ್ಲರೊಂದಿಗೂ ಬೆರೆಯುತ್ತೇನೆ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ತರುವುದಿಲ್ಲ. ನಿಮಗೆ ತೊಂದರೆಯಾದರೆ ಹೋರಾಟ ನಡೆಸುತ್ತೇನೆ ಎಂದು ಸದಾನಂದಗೌಡ ಇದೇ ವೇಳೆ ಭರವಸೆ ನೀಡಿದರು.
ಬಿಜೆಪಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ನಝೀರ್ ಪಾಷಾ ಮಾತನಾಡಿ, ಹಜ್‌ಭವನ ನಿರ್ಮಾಣಕ್ಕೆ 45ಕೋಟಿ ರೂ.ಬಿಡುಗಡೆ ಮಾಡಿದ್ದು ಸದಾನಂದಗೌಡರು. ಸಕಾಲ ಯೋಜನೆಯ ಹರಿಕಾರ ಇವರು. ಜಾತಿ ಭೇದ ಮಾಡುವುದಿಲ್ಲ. ಇವರ ಗೆಲುವಿಗೆ ಟೊಂಕಕಟ್ಟಿ ನಿಲ್ಲೋಣ ಎಂದು ಕರೆ ನೀಡಿದರು.
ಮುಖಂಡರಾದ ಜಗ್ಗೇಶ್, ಮುನಿರಾಜು, ಚಾಂದ್‌ಪಾಷ, ನಿಜಾಮುದ್ದೀನ್, ಶಾಹಿದ್ ಅಹಮದ್, ಕಬೀರ್, ಮುಬಾರಕ್, ಕೆನಡಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.







