ಜಿಲ್ಲಾಧಿಕಾರಿ ಪರ ನಿಖಿಲ್ ಬ್ಯಾಟಿಂಗ್; ಸುಮಲತಾ ವಿರುದ್ಧ ಆಕ್ರೋಶ

ಮಂಡ್ಯ, ಮಾ.31: ಒಬ್ಬ ಹೆಣ್ಣು ಮಗಳಾಗಿ ಇನ್ನೊಬ್ಬ ಹೆಣ್ಣು ಮಗಳ ಬಗ್ಗೆ ಮಾತಾಡೋದು ಸರಿಯಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ವಿರುದ್ಧ ನೀಡಿರುವ ಹೇಳಿಕೆಗೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ತಿರುಗೇಟು ನೀಡಿದ್ದಾರೆ.
ಮದ್ದೂರು ತಾಲೂಕಿನಲ್ಲಿ ರವಿವಾರ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಅವರು, ಆರೋಪ ಮಾಡಿದವರು ಸಾಕ್ಷಿ ನೀಡಲಿ. ಸಾಕ್ಷಿ ಇಲ್ಲದಿದ್ದರೆ ಆರೋಪ ಆರೋಪವಾಗೆ ಉಳಿಯುತ್ತದೆ. ಒಬ್ಬ ಅಧಿಕಾರಿಯ ಬಗ್ಗೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಪಕ್ಷೇತರ ಅಭ್ಯರ್ಥಿ ಹೇಳುತ್ತಾರೆ ದುಡ್ಡು ಅವರ ಬಳಿ ತಗೊಂಡು ಓಟು ನಮಗೆ ಹಾಕಿ ಅಂತಾ. ಜಿಲ್ಲೆಯ ಜನ ಸ್ವಾಭಿಮಾನಿಗಳು, ದುಡ್ಡಿಗೆ ಮತ ಮಾರಿಕೊಳ್ಳುವವರಲ್ಲ. ಯಾರ ಬಗ್ಗೆಯೂ ಕೀಳಾಗಿ ಮಾತನಾಡುವ ಸಂಸ್ಕೃತಿ ನನ್ನದಲ್ಲ. ನನಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯ, ಕುಮಾರಣ್ಣ ಅವರ ಮೇಲಿನ ವಿಶ್ವಾಸದಿಂದ ಅವರನ್ನು ಸಿಎಂ ಮಾಡಿದ್ದೀರಿ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ನೀಡಿರುವ ಪ್ರೀತಿಯನ್ನು ನನಗೂ ನೀಡಿ, ನಿಮ್ಮ ಸೇವೆಯನ್ನು ಉಸಿರಿರುವ ತನಕ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಜಿಲ್ಲೆಯ ಜನರ ಋಣವನ್ನು ತೀರಿಸಲು ನನಗೊಂದು ಅವಕಾಶ ಕೊಡಿ. ಸಂಸದನಾಗಿ ನಾನು ಮೆರೆಯಬೇಕಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ನಿಮ್ಮ ಪ್ರತಿನಿಧಿಯಾಗಿ ಸಂಸತ್‍ನಲ್ಲಿ ಪ್ರತಿಧ್ವನಿಸಬೇಕಾಗಿದೆ. ಜಿಲ್ಲೆಯ ಅಭಿವೃದ್ದಿಯೇ ನನ್ನ ಗುರಿ ಎಂದು ಅವರು ಹೇಳಿದರು.
ಕುಮಾರಸ್ವಾಮಿ ಅವರಿಗೆ ಅಧಿಕಾರ ಇಲ್ಲದಿದ್ದಾಗಲೂ ರೈತರ ಪರ ನಿಂತಿದ್ದರು. ಕಾವೇರಿ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಪಟ್ಟಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ನೊಂದ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ದೇವೇಗೌಡರು ಹುಟ್ಟಿದ್ದು ಹಾಸನದಲ್ಲಾದರು ಹೆಚ್ಚಿನ ಪ್ರೀತಿ ಸಿಗುತ್ತಿರುವುದು ಮಂಡ್ಯ ಜಿಲ್ಲೆಯಲ್ಲಿ ಎಂದರು.
ಪಕ್ಷೇತರ ಅಭ್ಯರ್ಥಿ ಜೆಡಿಎಸ್ ಮುಖಂಡರನ್ನು ಟೀಕಿಸುವ ಭರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡ ಅವರ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಸುಮಲತಾ ಅಂಬರೀಷ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಕೇವಲ 9 ತಿಂಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 8700 ಕೋಟಿ ಹಣ ನೀಡಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಒಂದು ಸಾವಿರ ಕೋಟಿ ಮೀರಿ ಯಾವ ಜಿಲ್ಲೆಗೂ ಅನುದಾನ ನೀಡಿಲ್ಲ. ಹಾಗೊಂದು ವೇಳೆ ಕೊಟ್ಟಿರೋ ಇತಿಹಾಸ ಇದ್ರೆ ನಾನು ರಾಜಕೀಯ ಬಿಟ್ಟುಬಿಡುತ್ತೇನೆ ಎಂದು ಎಂದರು.
ಇತ್ತೀಚೆಗೆ ಮದ್ದೂರಿನಲ್ಲಿ ಕೊಲೆಯಾದ ಜೆಡಿಎಸ್ ಮುಖಂಡ ಪ್ರಕಾಶ್ ಅವರ ಕೆ.ಹೊನ್ನಲಗೆರೆ ಮನೆಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ನಿಖಿಲ್‍ಕುಮಾರ್ ಸ್ವಾಮಿ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ತಾಲೂಕಿನ ಬೆಸಗರಹಳ್ಳಿ, ಚಾಮನಹಳ್ಳಿ, ಶಂಕರಪುರ, ಬೆಳತೂರು, ಈರೇಗೌಡನದೊಡ್ಡಿ, ಹೊಂಬಾಳೇಗೌಡನದೊಡ್ಡಿ, ಸೋಮನಹಳ್ಳಿ, ರುದ್ರಾಕ್ಷಿಪುರ, ನಿಡಘಟ್ಟ, ಹುಣಸೇಮರದೊಡ್ಡಿ, ತೈಲೂರು, ಹೊಸೂರು, ಕೆ.ಹೊನ್ನಲಗೆರೆ ಸೇರಿದಂತೆ ಇನ್ನಿತರರ ಕಡೆಗಳಲ್ಲಿ ಬಿರುಸಿನ ಮತಪ್ರಚಾರ ಮಾಡಿದರು.







