ಶ್ರೀನಗರ ಹೋಟೆಲ್ ಪ್ರಕರಣ: ಗೊಗೊಯಿಯ ಸೇವಾ ಹಿರಿತನಕ್ಕೆ ಕುತ್ತು
‘ಮಾನವ ಗುರಾಣಿ’ ಪ್ರಕರಣದಲ್ಲಿ ಸುದ್ದಿಯಾಗಿದ್ದ ಮೇಜರ್

ಹೊಸದಿಲ್ಲಿ/ಶ್ರೀನಗರ,ಮಾ.31: ಇಡೀ ದೇಶದಲ್ಲಿ ಆಕ್ರೋಶವನ್ನು ಸೃಷ್ಟಿಸಿದ್ದ 2017ರ ‘ಮಾನವ ಗುರಾಣಿ’ ವಿವಾದದ ಕೇಂದ್ರಬಿಂದುವಾಗಿದ್ದ ಮೇ.ಲೀತುಲ್ ಗೊಗೊಯಿ ಅವರ ವಿರುದ್ಧ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಳೆದ ವರ್ಷ ಶ್ರೀಗರದಲ್ಲಿ ಸ್ಥಳೀಯ ಮಹಿಳೆಯೊಂದಿಗೆ ಗೆಳೆತನ ಹೊಂದಿದ್ದಕ್ಕಾಗಿ ಶಿಕ್ಷೆಯಾಗಿ ಅವರ ಸೇವಾ ಹಿರಿತನದಲ್ಲಿ ಕಡಿತವಾಗುವ ಸಾಧ್ಯತೆಯಿದೆ.
ತನ್ನ ಯೂನಿಟ್‌ನಿಂದ ಅನಧಿಕೃತವಾಗಿ ಗೈರುಹಾಜರಾಗಿದ್ದ ಆರೋಪವನ್ನು ಹೊತ್ತಿರುವ ಗೊಗೊಯಿ ಅವರ ವಾಹನ ಚಾಲಕ ಸಮೀರ್ ಮಲ್ಲಾ ಅವರ ವಿರುದ್ಧದ ಕೋರ್ಟ್ ಮಾರ್ಷಲ್ ಕೂಡ ಇತ್ತೀಚಿಗೆ ಪೂರ್ಣಗೊಂಡಿದ್ದು, ಅವರಿಗೆ ತೀವ್ರ ವಾಗ್ದಂಡನೆಯನ್ನು ವಿಧಿಸುವ ನಿರೀಕ್ಷೆಯಿದೆ.
ಮಲ್ಲಾ 2017ರಲ್ಲಿ ಪ್ರಾದೇಶಿಕ ಸೇನೆಗೆ ಸೇರ್ಪಡೆಗೊಂಡಿದ್ದು,ಜಮ್ಮು-ಕಾಶ್ಮೀರದಲ್ಲಿ ಉಗ್ರವಾದದ ವಿರುದ್ಧ ಹೋರಾಡುತ್ತಿರುವ ಬಂಡಾಯ ನಿಗ್ರಹ ಪಡೆಯಾದ ರಾಷ್ಟ್ರೀಯ ರೈಫಲ್ಸ್‌ನ 53ನೇ ಸೆಕ್ಟರ್‌ನಲ್ಲಿ ಸೇವೆಗೆ ನಿಯೋಜಿಸಲಾಗಿತ್ತು.
ಫೆಬ್ರುವರಿಯಲ್ಲಿ ಗೊಗೊಯಿ ಮತ್ತು ಮಲ್ಲಾ ವಿರುದ್ಧ ಸಾಕ್ಷಗಳ ವಿಚಾರಣೆ ಪೂರ್ಣಗೊಂಡ ಬಳಿಕ ಕೋರ್ಟ್ ಮಾರ್ಷಲ್ ಕಲಾಪಗಳನ್ನು ಆರಂಭಿಸಲಾಗಿತ್ತು. ಅವರ ವಿರುದ್ಧದ ಸೇನೆಯ ನಿರ್ದೇಶಗಳನ್ನು ಉಲ್ಲಂಘಿಸಿ ಸ್ಥಳೀಯ ಮಹಿಳೆಯೊಂದಿಗೆ ಮೈತ್ರಿ ಬೆಳೆಸಿಕೊಂಡ ಮತ್ತು ಕಾರ್ಯಾಚರಣೆ ಪ್ರದೇಶದಲ್ಲಿರುವಾಗ ಕರ್ತವ್ಯದ ಸ್ಥಳದಿಂದ ದೂರವಿದ್ದ ಆರೋಪಗಳು ಕೋರ್ಟ್ ಮಾರ್ಷಲ್‌ನಲ್ಲಿ ಸಾಬೀತಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.
ಕಳೆದ ವರ್ಷದ ಮೇ.23ರಂದು ರೂಮ್ ಬಯಸಿ ಶ್ರೀನಗರದ ಹೋಟೆಲ್‌ವೊಂದಕ್ಕೆ ಸ್ಥಳೀಯ ಮಹಿಳೆಯೊಂದಿಗೆ ತೆರಳಿದ್ದ ಗೊಗೊಯಿ ಅಲ್ಲಿಯ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು.
ಕೋರ್ಟ್ ಮಾರ್ಷಲ್ ಕಲಾಪಗಳ ಸಂದರ್ಭದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ನಿರಾಕರಿಸಿದ್ದ ಮಹಿಳೆ,ತಾನು ಈಗಾಗಲೇ ದಂಡಾಧಿಕಾರಿಗಳ ಎದುರು ಹೇಳಿಕೆಯನ್ನು ನೀಡಿದ್ದು,ಅದನ್ನೇ ತನ್ನ ಅಂತಿಮ ನಿಲುವು ಎಂದು ಪರಿಗಣಿಸಬಹುದಾಗಿದೆ ಎಂದು ಸೇನೆಯ ಅಧಿಕಾರಿಗಳಿಗೆ ತಿಳಿಸಿದ್ದಳು.
ತಾನು ತನ್ನ ಸ್ವಂತ ಇಚ್ಛೆಯ ಮೇರೆಗೆ ಮೇ.ಗೊಗೊಯಿ ಜೊತೆ ಸುತ್ತಾಡಲು ತೆರಳಿದ್ದೆ ಮತ್ತು ಅವರ ನಕಲಿ ಫೇಸ್‌ಬುಕ್ ಪ್ರೊಫೈಲ್ ಮೂಲಕ ತಾನು ಅವರ ಸ್ನೇಹಿತೆಯಾಗಿದ್ದೆ ಎಂದೂ ಆಕೆ ಬಹಿರಂಗಗೊಳಿಸಿದ್ದಳು. ಮೇ.ಗೊಗೊಯಿ ಉಬೈದ್ ಅರ್ಮಾನ್ ಹೆಸರಿನಲ್ಲಿ ಈ ನಕಲಿ ಖಾತೆಯನ್ನು ಹೊಂದಿದ್ದರು.







