ಅಭ್ಯರ್ಥಿ ಪರ ಪ್ರಚಾರ ಮಾಡದೆ ಹಿಂದೆ ಸರಿದವರಿಗೆ ರಾಜಕೀಯ ಭವಿಷ್ಯದಲ್ಲಿ ಹಿನ್ನಡೆ: ಯು.ಟಿ.ಖಾದರ್
ಪುತ್ತೂರು: ಚುನಾವಣೆ ಬಂದಾಗ ಸ್ವಾರ್ಥವನ್ನು ಬಿಟ್ಟು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಬೇಕು. ರಾಜಕೀಯದಲ್ಲಿ ನಿಷ್ಠಾವಂತರಿಗೆ ಭವಿಷ್ಯವಿದೆ. ಹಿಂದಕ್ಕೆ ಸರಿದರೆ ಅವರಿಗೇ ಹಿನ್ನಡೆಯಾಗುತ್ತದೆ ಎಂದು ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಹಿಂದೇಟು ಹಾಕುತ್ತಿರುವ ಮುಖಂಡರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಅವರು ರವಿವಾರ ಪುತ್ತೂರಿನಲ್ಲಿ ಎ.1 ರಂದು ನಡೆಯುವ ಪಕ್ಷದ ಸಮಾವೇಶ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದರು.
ರಾಜಕೀಯ ಪಕ್ಷ ಹಾಗೂ ನಾಯಕರಿಗೆ ಚುನಾವಣೆ ಉಸಿರು ಇದ್ದಂತೆ. ಪಕ್ಷದ ಸಿದ್ಧಾಂತದಡಿಯಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಯರ ಪರ ಕೆಲಸ ಮಾಡಿ ಗೆಲ್ಲಿಸುವ ಹೊಣೆಗಾರಿಕೆ ಮುಖಂಡರು, ಕಾರ್ಯಕರ್ತರಿಗಿದೆ. ಚುನಾವಣೆ ಬಂದಾಗ ಒಂದೇ ಮನೆಯವರಲ್ಲಿಯೂ ಒಂದಷ್ಟು ಭಿನ್ನಾಭಿಪ್ರಾಯಗಳು ಬರುತ್ತವೆ. ಆದರೆ ಆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದಷ್ಟೇ ಗುರಿಯಾಗಬೇಕು ಎಂದರು.
ಮೈತ್ರಿ ಅಭ್ಯರ್ಥಿಯ ಸ್ಪರ್ಧೆಯ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಪುತ್ತೂರು ಜೆಡಿಎಸ್‍ನ ಕೆಲವು ಮುಂಖಂಡರ ಆರೋಪಕ್ಕೆ ಉತ್ತರಿಸಿದ ಯು.ಟಿ. ಖಾದರ್, ಜೆಡಿಎಸ್ ಜಿಲ್ಲಾಮಟ್ಟದ, ರಾಜ್ಯಮಟ್ಟದ ನಾಯಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಮೈತ್ರಿಯಲ್ಲಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಜೆಡಿಎಸ್, ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷದ ಕ್ಷೇತ್ರದ ಮುಖಂಡರ ಚುನಾವಣಾ ಸಮಿತಿಯನ್ನೂ ರಚಿಸಲಾಗಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಅದರ ಅಧ್ಯಕ್ಷರಾಗಿದ್ದಾರೆ. ಮಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನೂ ನಡೆಸಿ ಸಮನ್ವಯ ಸ್ಪರ್ಧೆಗೆ ಬೆಂಬಲವಿರುವುದನ್ನೂ ಘೋಷಿಸಲಾಗಿದೆ ಗೊತ್ತಿಲ್ಲ ಎಂದು ಹೇಳಿದರು.
ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ 50:50 ರ ಸ್ಪರ್ಧೆ ಇದೆ. ಇನ್ನೂ 18 ದಿನಗಳು ಇರುವುದರಿಂದ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಬಹುಮತದಿಂದ ಗೆಲ್ಲುವ ಆತ್ಮವಿಶ್ವಾಸವಿದೆ. ನಾವೆಲ್ಲರೂ ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭವಿಲ್ಲ ಎಂಬುದು ಬಿಜೆಪಿ ಯವರಿಗೂ ಅರ್ಥವಾಗಿದೆ ಎಂದರು.
ಜಿಲ್ಲೆಗೆ ರಾಷ್ಟ್ರೀಯ ನಾಯಕರು ಭೇಟಿ ನೀಡಿ ಪ್ರಚಾರ ನಡೆಸುವ ಕುರಿತು ಕೆಪಿಸಿಸಿಯಲ್ಲಿ ನಿರ್ಧಾರವಾಗಗಬೇಕಷ್ಟೆ. ರಾಜ್ಯಕ್ಕೆ ರಾಹುಲ್ ಗಾಂ„, ಪ್ರಿಯಾಂಕ ಗಾಂ„ ಮೊದಲಾದ ನಾಯಕರು ಆಗಮಿಸಲಿದ್ದು, ಜಿಲ್ಲೆಯಲ್ಲಿ ಪ್ರಚಾರಕ್ಕೆ ಆಗಮಿಸುವ ಕುರಿತು ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಯು. ಟಿ. ಖಾದರ್ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಉಸ್ತುವಾರಿ ಸವಿತಾ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮತ್ತಿತರರು ಉಪಸ್ಥಿತರಿದ್ದರು.







