ಭಾರತದ ಚುನಾವಣೆಯಲ್ಲಿ ಚೀನಿ ಆ್ಯಪ್ ನ ಹಸ್ತಕ್ಷೇಪ !
11 ಸಾವಿರ ಜಾಹಿರಾತುಗಳಿಗೆ ಫೇಸ್ ಬುಕ್ ಖೊಕ್

ಹೊಸದಿಲ್ಲಿ,ಮಾ.28: ರಾಜಕೀಯ ಪ್ರೇರಿತವಾದ ವಿಷಯಗಳನ್ನು ಹೊಂದಿರುವ ಕಾರಣಕ್ಕಾಗಿ, ‘ಹೆಲೋ’ ಹೆಸರಿನ ಚೀನಿ ಆ್ಯಪ್ ಪೋಸ್ಟ್ ಮಾಡಿರುವ 11 ಸಾವಿರ ಜಾಹೀರಾತುಗಳನ್ನು ಖ್ಯಾತ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತೆಗೆದುಹಾಕಿದೆ.
ರಾಜಕೀಯ ವ್ಯಕ್ತಿಗಳು, ರಾಜಕೀಯ ಹಾಗೂ ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್ ಈ ಜಾಹೀರಾತುಗಳನ್ನು ಕಿತ್ತುಹಾಕಿದೆಯೆನ್ನಲಾಗಿದೆ. ಆದರೆ ಈ ಜಾಹೀರಾತಿಗೆ ಯಾರು ಹಣ ಪಾವತಿಸಿದ್ದಾರೆಂಬುದನ್ನು ಅದು ತಿಳಿಸಿಲ್ಲ.
ಒಂದೇ ಆ್ಯಪ್‌ನಿಂದ ಗರಿಷ್ಠ ಸಂಖ್ಯೆಯ ಜಾಹೀರಾತುಗಳನ್ನು ಫೇಸ್‌ಬುಕ್ ತೆಗೆದುಹಾಕಿದ ಪ್ರಕರಣ ಇದಾಗಿದೆ. ಆ್ಯಡ್‌ಲೈಬ್ರರಿ ವರದಿಯ ಪ್ರಕಾರ ಫೇಸ್‌ಬುಕ್ ವಿಗೊ ವಿಡಿಯೋ ಪ್ರಸಾರ ಮಾಡಿದ 49 ಜಾಹೀರಾತುಗಳು, ಶೇರ್‌ಚ್ಯಾಟ್‌ನ 7 ಜಾಹೀರಾತುಗಳನ್ನು ಕೂಡಾ ಕಿತ್ತುಹಾಕಿದೆ.

ಫೇಸ್‌ಬುಕ್‌ನ ಆ್ಯಡ್‌ಲೈಬ್ರರಿಯಲ್ಲಿ ದೊರೆತ ದತ್ತಾಂಶಗಳ ಪ್ರಕಾರ ಈ ಎಲ್ಲಾ ಜಾಹೀರಾತುಗಳಿಗೆ ಅಂದಾಜು 7.7 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ ಈ ದತ್ತಾಂಶದ ನಿಖರತೆಯನ್ನು ದೃಢಪಡಿಸಲು ಹೆಲೊ ನಿರಾಕರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಸಾರ ಮಾಡಸಲಾಗುತ್ತಿರುವ ಬಗ್ಗೆ ಚುನಾವಣಾ ಆಯೋಗ ಆತಂಕಗಳನ್ನು ವ್ಯಕ್ತಪಡಿಸಿರುವ ಸಮಯದಲ್ಲೇ ಈ ಬೆಳವಣಿಗೆ ಸಂಭವಿಸಿದೆ.

ಸಾಮಾನ್ಯವಾಗಿ ಹೆಲೋ ಆ್ಯಪ್, ಜೋಕುಗಳು, ಶಾಯರಿ, ಕ್ರೀಡಾ ಮಾಹಿತಿ, ಮನರಂಜನೆ ಹಾಗೂ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತ ವಿಷಯಗಳನ್ನು 14 ಭಾರತೀಯ ಭಾಷೆಗಳಲ್ಲಿ ಪ್ರಸಾರ ಮಾಡುತ್ತಿದೆ.
ಇದರ ಜಾಹೀರಾತು ಯಾವುದೇ ರಾಜಕೀಯ ಪಕ್ಷಕ್ಕೆ ಉತ್ತೇಜನ ನೀಡುವುದಿಲ್ಲ. ಆದರೆ ರಾಜಕಾರಣಿಗಳು, ರಾಜಕೀಯ ಹಾಗೂ ರಾಷ್ಟ್ರೀಯ ನಾಯಕರ ಕುರಿತ ಸುದ್ದಿಗಳನ್ನು ಹೆಲೋ ಪ್ರದರ್ಶಿಸುತ್ತದೆ.









