ಭಾರತೀಯ ದಂತವೈದ್ಯ ಶಿಕಾಗೊದಲ್ಲಿ ಅಪಘಾತದಲ್ಲಿ ಸಾವು
ಶಿಕಾಗೊ, ಮಾ. 31: ಅಮೆರಿಕದಲ್ಲಿ ಉನ್ನತ ವೈದ್ಯಕೀಯ ಕೋರ್ಸ್ ಕಲಿಯುತ್ತಿದ್ದ 32 ವರ್ಷದ ಭಾರತೀಯ ದಂತವೈದ್ಯರೊಬ್ಬರು ಶಿಕಾಗೊದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್‌ನ ಡಾ. ಅರ್ಶದ್ ಮುಹಮ್ಮದ್ ಮೃತಪಟ್ಟವರು.
ವೆಟರನ್ಸ್ ಮೆಮೋರಿಯಲ್ ಟಾಲ್‌ವೇಯಲ್ಲಿ ಗುರುವಾರ ರಾತ್ರಿ ತಪ್ಪು ಬದಿಯಲ್ಲಿ ಚಲಿಸುತ್ತಿದ್ದ ಕಾರೊಂದು ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ತಪ್ಪು ದಾರಿಯಲ್ಲಿ ಬಂದು ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕನೂ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಡಾ. ಮುಹಮ್ಮದ್ ಯುಐಸಿಯಲ್ಲಿ ಓರ್ತೊಡಾಂಟಿಕ್ಸ್‌ನಲ್ಲಿ ಅಡ್ವಾನ್ಸ್‌ಡ್ ಸರ್ಟಿಫಿಕೇಟ್ ಮತ್ತು ಓರಲ್ ಸಯನ್ಸಸ್‌ನಲ್ಲಿ ಮಾಸ್ಟರ್ಸ್ ಆಫ್ ಸಯನ್ಸ್ ಅಧ್ಯಯನ ಮಾಡುತ್ತಿದ್ದರು.
ಡಾ. ಮುಹಮ್ಮದ್ ಶಿಕಾಗೊದ ಇಲಿನಾಯಿಸ್ ವಿಶ್ವವಿದ್ಯಾನಿಲಯದಲ್ಲಿ 2018ರಲ್ಲಿ ಪದವಿ ಪಡೆದಿದ್ದರು. ಅವರಿಗೆ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಓರ್ತೊಡಾಂಟಿಕ್ಸ್ ಪ್ರಶಸ್ತಿ ಮತ್ತು ಡಾ. ಅಲನ್ ಸಿ. ಪೀಟರ್‌ಸನ್ ಸ್ಕಾಲರ್‌ಶಿಪ್ ಪ್ರಶಸ್ತಿಗಳು ಲಭಿಸಿದ್ದವು.





