ಮುಝಫ್ಫರ್‌ಪುರ ಆಶ್ರಯತಾಣ ಪ್ರಕರಣದ ಆರೋಪಿ ಜೊತೆ ವೇದಿಕೆ ಹಂಚಿದ ಕೇಂದ್ರ ಸಚಿವ

ಬೇಗುಸರಾಯಿ,ಮಾ.31: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶನಿವಾರ ಮುಝಫ್ಫರ್‌ಪುರ ಆಶ್ರಯತಾಣ ಪ್ರಕರಣದ ಆರೋಪಿ ಮಂಜು ವರ್ಮಾ ಜೊತೆ ವೇದಿಕೆ ಹಂಚಿಕೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಳೆದ ವಾರ ಮಾಜಿ ಜೆಡಿಯು ಸದಸ್ಯೆ ಮಂಜು ವರ್ಮಾ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದ ಕಾರಣ ವಿಪಕ್ಷಗಳಿಂದ ಟೀಕೆಗೊಳಗಾಗಿದ್ದರು.
ಮಾರ್ಚ್ 12ರಂದು ಬಿಹಾರದ ಬೇಗುಸರಾಯಿಯಲ್ಲಿ ಎನ್‌ಡಿಯ ನಾಯಕರನ್ನುದ್ದೇಶಿಸಿ ಮಾತನಾಡುವ ವೇಳೆ ಗಿರಿರಾಜ್ ಸಿಂಗ್ ಪಟ್ನಾ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿರುವ ಮಂಜು ವರ್ಮಾ ಜೊತೆ ವೇದಿಕೆ ಹಂಚಿಕೆಕೊಂಡಿದ್ದರು.
ಗಿರಿರಾಜ್ ಸಿಂಗ್ ಬೇಗುಸರಾಯಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಇಲ್ಲಿ ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಸಿಪಿಐ(ಎಂ) ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಮುಝಫ್ಫರ್‌ಪುರ ಆಶ್ರಯತಾಣದಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಮಂಜು ವರ್ಮಾ ಅವರ ನಿವಾಸದಲ್ಲಿ 50 ಸಜೀವ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಕಳೆದ ನವೆಂಬರ್‌ನಲ್ಲಿ ಬೇಗುಸರಾಯಿ ಜೈಲಿಗೆ ಕಳುಹಿಸಲಾಗಿತ್ತು. ಕಳೆದ ವರ್ಷ ಜೆಡಿಯುನಿಂದ ಅಮಾನತುಗೊಳಿಸಲ್ಪಟ್ಟ ವರ್ಮಾ ಇತ್ತೀಚೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಬಿಹಾರದ ಮುಝಫ್ಫರ್‌ಪುರದ ಆಶ್ರಯತಾಣದಲ್ಲಿ 30ಕ್ಕೂ ಅಧಿಕ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸುತ್ತಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಬೃಜೇಶ್ ಠಾಕೂರ್ ಜೊತೆ ಮಂಜು ವರ್ಮಾರ ಪತಿಗೆ ಸಂಪರ್ಕವಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವರ್ಮಾ ತನ್ನ ಸಾಮಾಜಿಕ ಕಲ್ಯಾಣ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.







