ಕುಂದಾಪುರ ದಂಪತಿಗೆ ಇರಿತ ಪ್ರಕರಣ: ಎರಡೂ ಕುಟುಂಬ ಜರ್ಮನಿಗೆ ತೆರಳಲು ಸಿದ್ಧತೆ

ಉಡುಪಿ, ಮಾ. 31: ಜರ್ಮನಿಯ ಮ್ಯೂನಿಚ್ ನಗರದಲ್ಲಿ ಕುಂದಾಪುರ ಮೂಲದ ಪ್ರಶಾಂತ್ ಬಸ್ರೂರು (51) ಹತ್ಯೆ ಮತ್ತು ಪತ್ನಿ ಸ್ಮಿತಾ (40) ಗಂಭೀರ ಗಾಯಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಎರಡೂ ಕುಟುಂಬದವರು ಜರ್ಮನಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರಶಾಂತ್ ತಾಯಿ ವಿನಯ (73) ಹಾಗೂ ಸ್ಮಿತಾ ಕುಟುಂಬದವರು ಬೆಂಗಳೂರಿಗೆ ತೆರಳಿದ್ದಾರೆ.
ಸಾಗರದಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಪತಿ ವೆಂಕಟರಾಮ ನಿಧನರಾದ ಬಳಿಕ 2013ರಲ್ಲಿ ಕುಂದಾಪುರ ಕುಂದೇಶ್ವರ ದೇವಸ್ಥಾನ ಸಮೀಪ ಪ್ರಶಾಂತ್ ನಿರ್ಮಿಸಿಕೊಟ್ಟ ಮನೆಯಲ್ಲಿ ಒಂಟಿಯಾಗಿ ವಾಸವಾಗಿರುವ ವಿನಯ, ಮಗನ ಸಾವಿನ ಸುದ್ದಿ ತಿಳಿದು ಮಾ.30ರಂದು ಉಡುಪಿ ಅಂಬಲಪಾಡಿಯಲ್ಲಿರುವ ಮಗಳು ಸಾಧನ ಅವರ ಮನೆಗೆ ಬಂದಿದ್ದು, ಜರ್ಮನಿಗೆ ತೆರಳುವ ಹಿನ್ನೆಲೆಯಲ್ಲಿ ಅದೇ ದಿನ ರಾತ್ರಿ ಕಾರಿನಲ್ಲಿ ಬೆಂಗಳೂರಿನಲ್ಲಿರುವ ಇನ್ನೋರ್ವ ಮಗ ಪ್ರಾತ್ ಎಂಬವರ ಮನೆಗೆ ತೆರಳಿದ್ದಾರೆ.
ಅದೇ ರೀತಿ ಕುಂದಾಪುರ ಸಿದ್ಧಾಪುರದಲ್ಲಿರುವ ಸ್ಮಿತಾ ತಂದೆ ಡಾ. ಚಂದ್ರ ಮೌಳಿ, ತಾಯಿ ವಿದ್ಯಾ, ಸಹೋದರ ಸುಜಯ್ ಮತ್ತು ಆತನ ಪತ್ನಿ ಕೂಡ ಮನೆಗೆ ಬೀಗ ಹಾಕಿ ಇಂದು ಬೆಂಗಳೂರಿಗೆ ತೆರಳಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇವರಲ್ಲಿ ಚಂದ್ರಮೌಳಿ ಮತ್ತು ವಿದ್ಯಾ ಜರ್ಮನಿಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವಿನಯ ಈ ಹಿಂದೆ ಎರಡು ಮೂರು ಬಾರಿ ಮಗನ ಜರ್ಮನಿ ಯಲ್ಲಿರುವ ಮನೆಗೆ ಹೋಗಿ ಬಂದಿದ್ದು, ಕೊನೆಯದಾಗಿ ಆರೇಳು ವರ್ಷಗಳ ಹಿಂದೆ ಹೋಗಿ ದ್ದರು. ಇದೀಗ ಅವರ ಪಾಸ್‌ಪೋರ್ಟ್ ಅವಧಿಯು ಎ.14ಕ್ಕೆ ಮುಗಿಯಲಿದ್ದು, ಅದರ ತುರ್ತು ನವೀಕರಣಕ್ಕಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮೂಲಕ ಪ್ರಯತ್ನಿಸಲಾಗುತ್ತಿದೆ. ಹೀಗೆ ಮೂವರಿಗೆ ಜರ್ಮನಿಗೆ ತೆರಳಲು ವೀಸಾ ವ್ಯವಸ್ಥೆ ಕಲ್ಪಿಸಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ.
ಪ್ರಕರಣದ ತನಿಖೆಗೆ ಒತ್ತಾಯ: ಉಡುಪಿ ಅಂಬಲಪಾಡಿಯಲ್ಲಿ ವಾಸ ವಾಗಿರುವ ಮೃತ ಪ್ರಶಾಂತ್ ಬಸ್ರೂರು ಅವರ ಅಕ್ಕ ಸಾಧನ ಹಾಗೂ ಭಾವ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮೆನೇಜರ್ ಶ್ರೀನಿವಾಸ್ ಶೇರಿಗಾರ್ ಈ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಶಾಂತ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಯಾರೊಂದಿಗೂ ಜಗಳ ಮಾಡುವವನಲ್ಲ. ಹಾಗಾಗಿ ಆತನ ಕೊಲೆ ಹೇಗೆ ನಡೆಯಿತು ಮತ್ತು ಅದಕ್ಕೆ ಕಾರಣ ಏನು ಎಂಬುದು ತಿಳಿಯಬೇಕು. ಆದುದರಿಂದ ಸಮಗ್ರ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮಗನ ಸಾವಿನ ಸುದ್ದಿ ತಿಳಿದು ಕಣ್ಣೀರಿಡುತ್ತಿರುವ ತಾಯಿಗೆ ಮಗನನ್ನು ನೋಡಲು ಜರ್ಮನಿಗೆ ಹೋಗಲು ಅವಕಾಶ ಕಲ್ಪಿಸಬೇಕು. ಅಲ್ಲದೆ ಮೃತದೇಹ ವನ್ನು ಊರಿಗೆ ತರಲು ಭಾರತ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಾಧನ ಒತ್ತಾಯಿಸಿದ್ದಾರೆ.
‘ಪ್ರಶಾಂತ್ ಊರಿಗೆ ಬಂದರೆ ನಮ್ಮ ಮನೆಯಲ್ಲಿ ಕುಟುಂಬ ಸಮೇತವಾಗಿ ಎರಡು ದಿನ ಕುಳಿತು ಹೋಗುತ್ತಿದ್ದನು. ಊರಿಗೆ ಬಂದಾಗ ಎಲ್ಲ ದೇವಸ್ಥಾನ ಗಳಿಗೆ ಭೇಟಿ ನೀಡುತ್ತಾನೆ. ಕಳೆದ ಬಾರಿ ಧರ್ಮಸ್ಥಳಕ್ಕೆ ಹೋದವನು 50 ಸಾವಿರ ರೂ. ದೇಣಿಗೆ ನೀಡಿದ್ದಾನೆ. ಆತನಿಗೆ ಯಾವುದೇ ಕೆಟ್ಟ ಚಟ ಇಲ್ಲ’ ಎಂದು ಸಾಧನ ತಿಳಿಸಿದರು.
ಮುಂದಿನ ತಿಂಗಳು ಊರಿಗೆ ಬರುವವರಿದ್ದರು !
2017ರ ಜುಲೈ ತಿಂಗಳಲ್ಲಿ ಊರಿಗೆ ಬಂದು ಹೋಗಿದ್ದ ಪ್ರಶಾಂತ್ ಹಾಗೂ ಅವರ ಕುಟುಂಬ, ಮಕ್ಕಳಿಗೆ ಶಾಲಾ ರಜೆಯ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಊರಿಗೆ ಬರುವ ಯೋಜನೆ ಹಾಕಿಕೊಂಡಿದ್ದರು.
ನಿಟ್ಟೆಯಲ್ಲಿ ಇಂಜಿನಿಯರ್ ಮುಗಿಸಿದ್ದ ಪ್ರಶಾಂತ್, ನಂತರ ಬೆಂಗಳೂರು ಹಾಗೂ ಹೈದರಾಬಾದಿನ ಸತ್ಯಂ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದನು. ಮದುವೆ ನಂತರ 2003ರಲ್ಲಿ ಪ್ರಶಾಂತ್ ಸತ್ಯಂ ಕಂಪೆನಿ ಮೂಲಕ ಜರ್ಮನಿ ಯ ಆಗ್ಸ್‌ಬರ್ಗ್‌ನಲ್ಲಿರುವ ಭಾರತೀಯ ಕಂಪೆನಿಗೆ ಉದ್ಯೋಗಿಯಾಗಿ ತೆರಳಿ ದ್ದರು.
ಮುಂದೆ ಉನ್ನತ ಅಭ್ಯಾಸ ನಡೆಸಿದ ಪ್ರಶಾಂತ್ ಮುಂದೆ ಜರ್ಮನಿಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಸೇರಿಕೊಂಡರು. ನಂತರ ಅವರು ಮ್ಯೂನಿಚ್ ನಗರಕ್ಕೆ ವರ್ಗಾವಣೆಗೊಂಡರು.
ಗೃಹಿಣಿಯಾಗಿದ್ದ ಸ್ಮಿತಾ ಒಂದು ವರ್ಷದ ಹಿಂದೆ ಅಲ್ಲಿಯೇ ಕೆಲಸಕ್ಕೆ ಸೇರಿದ್ದರು. ಕಳೆದ ವರ್ಷ ಇವರಿಗೆ ಜರ್ಮನಿಯ ಪೌರತ್ವ ದೊರಕಿತ್ತು. ಸದ್ಯ ಪ್ರಶಾಂತ್ ಜರ್ಮನಿಯಲ್ಲಿ ಸ್ವಂತ ಮನೆ ನಿರ್ಮಿಸುತ್ತಿದ್ದನು ಎಂದು ಕುಟುಂಬದ ಮೂಲಗಳು ತಿಳಿಸಿವೆ.
22 ವರ್ಷಗಳ ಹಿಂದೆ ವಿವಾಹ: ಪ್ರಶಾಂತ ಹಾಗೂ ಸ್ಮಿತಾ 22 ವರ್ಷ ಗಳ ಹಿಂದೆ ವಿವಾಹವಾಗಿದ್ದು, ಕಳೆದ 18ವರ್ಷಗಳಿಂದ ದಂಪತಿ ಮಕ್ಕಳು ಸಹಿತ ಜರ್ಮನಿಯಲ್ಲಿ ವಾಸವಾಗಿದ್ದಾರೆ. ಸದ್ಯ ಅವರು ಜರ್ಮನಿಯ ನಾಗರಿಕರೂ ಕೂಡ ಆಗಿದ್ದಾರೆ ಎಂದು ಸ್ಮಿತಾ ಸಹೋದರ ಸುಜಯ್ ತಿಳಿಸಿದ್ದಾರೆ.
ಡಿಪ್ಲೊಮಾ ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಪ್ರಶಾಂತ್ ಜರ್ಮನಿ ಯಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿದ್ದರು. ಪತ್ನಿ ಸ್ಮೀತಾ ಕುಂದಾಪುರದ ಭಂಡಾಕಾರ್ಸ್ ಕಾಲೇಜಿನಲ್ಲಿ ಪದವಿ ಹಾಗೂ ಮಂಗಳೂರು ವಿವಿಯಲ್ಲಿ ಎಂಎ ಪದವಿಯನ್ನು ಪಡೆದಿದ್ದರು. ಸದ್ಯ ಅವರು ಜರ್ಮನಿಯಲ್ಲಿ ಗೃಹಿಣಿಯಾಗಿದ್ದಾರೆ. ಇವರ ಮಗಳು ಸಾಕ್ಷೀ(15) ಹಾಗೂ ಮಗ ಶ್ಲೋಕ್(10) ಇವರ ಜೊತೆಯಲ್ಲಿ ವಾಸವಾಗಿದ್ದಾರೆ.
ಡಾ.ಚಂದ್ರಮೌಳಿ ಕೆಲವು ತಿಂಗಳ ಹಿಂದೆ ತನ್ನ ಮಕ್ಕಳನ್ನು ಕಾಣಲು ದುಬೈ, ಅಮೆರಿಕಾ ಹಾಗೂ ಸ್ಮಿತಾ ಇರುವ ಜರ್ಮನಿಗೂ ಹೋಗಿ ಬಂದಿದ್ದರು. ಒಂದು ವರ್ಷದ ಹಿಂದೆ ಪ್ರಶಾಂತ್, ಸ್ಮಿತಾ ಹಾಗೂ ಮಕ್ಕಳು ಊರಿಗೆ ಬಂದು ಹೋಗಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ನೀರವ ಮೌನ: ಈ ಘಟನೆಯಿಂದ ಸ್ಮಿತಾ ಅವರ ಕುಟುಂಬ ದವರು ಆತಂಕಕ್ಕೆ ಒಳಗಾಗಿದ್ದು, ಸಿದ್ಧಾಪುರದ ಮನೆಯಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.
ಇದೀಗ ಮನೆ ಮಗಳನ್ನು ನೋಡಲು ಈಗಾಗಲೇ ಪಾಸ್‌ಪೋರ್ಟ್ ಹೊಂದಿರುವ ತಂದೆ ಚಂದ್ರಮೌಳಿ ಹಾಗೂ ಸಹೋದರ ಸುಜಯ್ ಜರ್ಮನಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂಬಂಧ ಭಾರತ ಸರಕಾ ಕೂಡ ಇವರ ಸಂಪರ್ಕದಲ್ಲಿ ಇದೆ.
ಸ್ಮಿತಾ ಅವರ ತಾಯಿ ಬಳಿ ಪಾಸ್‌ಪೋರ್ಟ್ ಇಲ್ಲ ಎಂಬ ವಿಚಾರ ತಿಳಿದು ಬಂದಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಒಟ್ಟಾರೆ ಇಡೀ ಕುಟುಂಬ ಜರ್ಮನಿ ತೆರಳುವ ಸಾಧ್ಯತೆಗಳಿವೆ ಎಂದ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲದೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಸೂಚನೆ ಮೇರೆಗೆ ಸ್ಥಳೀಯ ಶಂಕರಾನಾರಾಯಣ ಪೊಲೀಸರು ಸ್ಮಿತಾ ಕುಟುಂಬದವರನ್ನು ಭೇಟಿ ಯಾಗಿದ್ದಾರೆ.
‘ಈ ಘಟನೆ ಬಗ್ಗೆ ನಿನ್ನೆ ರಾತ್ರಿ ನಮಗೆ ಕರೆ ಬಂದಿದೆ. ಅದರ ನಂತರ ಭಾರತ ಹಾಗೂ ಜರ್ಮನ್ ಸರಕಾರ ನಿರಂತರ ನನ್ನ ಸಂಪರ್ಕದಲ್ಲಿದೆ. ನಮ್ಮನ್ನು ಕಳುಹಿಸಿ ಕೊಡುವ ಬಗ್ಗೆ ಭಾರತ ಸರಕಾರ ಸಿದ್ಧತೆಗಳನ್ನು ನಡೆಸುತ್ತಿದೆ. ನಾನು, ತಂದೆ ಮತ್ತು ತಾಯಿ ಹೋಗುವ ಉದ್ದೇಶ ಇಟ್ಟುಕೊಂಡಿದ್ದೇವೆ. ಸದ್ಯ ಬೇರೆ ಯಾವುದೇ ಮಾಹಿತಿ ನಮಗೆ ಇಲ್ಲ’
-ಸುಜಯ್, ಸ್ಮಿತಾ ಸಹೋದರ
ಸಿದ್ಧಾಪುರದಲ್ಲಿರುವ ಸ್ಮಿತಾ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಸ್ಮಿತಾ ತಂದೆ, ತಾಯಿ ಮತ್ತು ಸಹೋದರ ಜರ್ಮನಿಗೆ ತೆರಳುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ತಂದೆ ಮತ್ತು ಸಹೋದರನಲ್ಲಿ ಪಾಸ್‌ಪೋರ್ಟ್ ಇದ್ದು, ತಾಯಿಯ ಪಾಸ್‌ಪೋರ್ಟ್ ನವೀಕರಣಕ್ಕೆ ಬಂದಿದೆ. ತಾಯಿ ಕೂಡ ಹೋಗು ವುದಾದರೆ ನವೀಕರಣ ಕಾರ್ಯವನ್ನು ಕೂಡಲೇ ಮಾಡಿಕೊಡುತ್ತೇವೆ. ಘಟನೆ ಸಂಬಂಧ ಭಾರತ ಸರಕಾರದಿಂದ ನಮಗೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ.
-ನಿಶಾ ಜೇಮ್ಸ್, ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ ಜಿಲ್ಲೆ.







