ಕ್ಷುಲ್ಲಕ ವಿಚಾರಕ್ಕೆ ದಂಪತಿ ಆತ್ಮಹತ್ಯೆ: ಅನಾಥವಾಯಿತು ಮೂರು ವರ್ಷದ ಹೆಣ್ಣು ಮಗು

ಮಡಿಕೇರಿ,ಎ.1: ಗಂಡ, ಹೆಂಡತಿ ಜಗಳ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಮಡಿಕೇರಿ ನಗರದ ಪಂಪಿನ ಕೆರೆ ಬಡಾವಣೆಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ನೇಣಿಗೆ ಶರಣಾಗಿದ್ದು, ಮೂರು ವರ್ಷದ ಹೆಣ್ಣು ಮಗು ಅನಾಥವಾಗಿದೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿದ್ದ ಚೇತನ್(34) ಹಾಗೂ ವಾಣಿ(27) ಆತ್ಮಹತೈಗೆ ಶರಣಾದ ದಂಪತಿ.
ಚೇತನ್ ಮೂಲತಃ ತಿಪಟೂರು ನಿವಾಸಿಯಾಗಿದ್ದು, ಕಳೆದ 4 ವರ್ಷದ ಹಿಂದೆ ತುಮಕೂರು ಮೂಲದ ವಾಣಿ ಎಂಬವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮೂರು ವರ್ಷದ ಮಗುವಿದ್ದು, ಕೆಲವು ದಿನಗಳ ಹಿಂದೆ ದಂಪತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಮನಸ್ತಾಪವಾಗಿ, ಬಳಿಕ ಎರಡೂ ಕುಟುಂಬಗಳ ಸದಸ್ಯರು ಇದನ್ನು ಬಗೆ ಹರಿಸಿದ್ದರು ಎನ್ನಲಾಗಿದೆ.
ಇಂದು ಮಧ್ಯಾಹ್ನ ವೇಳೆಯಲ್ಲಿ ವಾಣಿ ತನ್ನ ಪೋಷಕರಿಗೆ ಕರೆ ಮಾಡಿ ತಾನು ಆತ್ಮಹತೈ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಳು ಎಂದು ಹೇಳಲಾಗಿದೆ. ವಾಣಿಯ ಪೋಷಕರು ತಕ್ಷಣ ಚೇತನ್‍ಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ಚೇತನ್ ಮನೆಗೆ ಬಂದಾಗ ವಾಣಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡು ಬಂದಿದೆ.
ಇದರಿಂದ ಆಘಾತಗೊಂಡ ಚೇತನ್ ಮನೆಯ ಹೊರಗೆ ಬಟ್ಟೆ ಒಣಗಿಸಲು ಅಳವಡಿಸಿದ್ದ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದಕೊಂಡು ಆತ್ಮಹತೈ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಚೇತನ್ ತನ್ನ ಪೋಷಕರಿಗೆ ಕರೆ ಮಾಡಿ ನಡೆದ ವಿಚಾರವನ್ನು ತಿಳಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಸಾವಿಗೆ ಶರಣಾಗಿದ್ದಾನೆ.
ಕರೆ ಬಂದ ತಕ್ಷಣ ಚೇತನ್ ಪೋಷಕರು ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಇಬ್ಬರೂ ಮೃತಪಟ್ಟಿದ್ದರು. ನಗರ ಠಾಣಾಧಿಕಾರಿ ಷಣ್ಮುಗ ಹಾಗೂ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







