ಶಿವಮೊಗ್ಗ: ವಾಹನ ತಪಾಸಣೆ ನಡೆಸದೆ ನಿದ್ರಿಸಿದ ಮೂವರು ಚುನಾವಣಾ ಸಿಬ್ಬಂದಿಗಳ ಅಮಾನತು

ಶಿವಮೊಗ್ಗ, ಎ.1: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಿಕಾರಿಪುರ ತಾಲೂಕಿನ ಖವಾಸಪುರದಲ್ಲಿ ತೆರೆಯಲಾಗಿರುವ ಚೆಕ್‍ಪೋಸ್ಟ್ ನ ಮೂವರು ಸಿಬ್ಬಂದಿಗಳನ್ನು ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಅಮಾನತುಗೊಳಿಸಿ, ಸೋಮವಾರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಆದೇಶ ಹೊರಡಿಸಿದ್ದಾರೆ.
ಶಿಕಾರಿಪುರದ ಸರ್ಕಾರಿ ಪಿಯು ಕಾಲೇಜ್‍ನ ಬಿ.ವಿ.ಅಶೋಕರಾಜಾ, ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಬಿ.ಸಿ.ಮಂಜಪ್ಪ ಹಾಗೂ ಬೇಗೂರು ಗ್ರಾಮದ ಸಿಆರ್‍ಪಿ ಡಿ.ಬಿ.ಚನ್ನೇಶ ಅಮಾನತುಗೊಂಡ ಸಿಬ್ಬಂದಿಗಳೆಂದು ಗುರುತಿಸಲಾಗಿದೆ.
ಕಾರಣವೇನು?: ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಮೂವರು ನೌಕರರು, ಮಾ. 31 ರಂದು ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿಯಿಡಿ ಚೆಕ್‍ಪೊಸ್ಟ್ ಮೂಲಕ ಹಾದು ಹೋಗುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಿ ಮಾಹಿತಿ ಕಲೆ ಹಾಕಬೇಕಾಗಿತ್ತು. ಆದರೆ ಈ ಸಿಬ್ಬಂದಿಗಳು, ವಾಹನಗಳ ತಪಾಸಣೆ ನಡೆಸದೆ ರಾತ್ರಿ ನಿದ್ರೆಗೆ ಶರಣಾಗಿದ್ದರು. ಈ ಕುರಿತಂತೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಕರ್ತವ್ಯ ಲೋಪ ಎಸಗಿದ ನೌಕರರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
'ಎಸ್‍ಎಸ್‍ಟಿ ತಂಡದಲ್ಲಿ ನಿಯೋಜಿತರಾದ ಅಧಿಕಾರಿ - ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವುದಕ್ಕೂ ಮುನ್ನ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಲಾಗಿರುತ್ತದೆ. ಸಮರ್ಪಕವಾಗಿ ಕರ್ತವ್ಯ ನಿಭಾಯಿಸುವಂತೆ ಸೂಚಿಸಲಾಗಿರುತ್ತದೆ. ಆದರೆ ಈ ಇಬ್ಬರು ನೌಕರರು ಕರ್ತವ್ಯ ನಿರ್ವಹಿಸದೆ ನಿದ್ರಿಸುತ್ತಿದ್ದರು' ಎಂದು ಅಮಾನತು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.







