ಬಿಜೆಪಿ ಹಿರಿಯ ಮುಖಂಡ ಕೆ.ಬಿ.ಶಾಣಪ್ಪ ಕಾಂಗ್ರೆಸ್ ಸೇರ್ಪಡೆ

ಕಲಬುರಗಿ, ಎ.1: ಇತ್ತೀಚೆಗಷ್ಟೇ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ಕೆ.ಬಿ.ಶಾಣಪ್ಪರನ್ನು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಕಲಬುರಗಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕೆ.ಬಿ.ಶಾಣಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ನಮಗೆ ಆನೆ ಬಲ ಬಂದಂತಾಗಿದೆ. 1972ರಲ್ಲಿ ನಾನು ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದರು. ಈಗ 2019ರಲ್ಲಿ ಮತ್ತೆ ನನಗೆ ಮತ ನೀಡಲು ಬಂದಿದ್ದಾರೆ ಎಂದರು.
ತತ್ವ, ಸಿದ್ಧಾಂತಗಳಿಗೆ ಬೆಲೆ ಕೊಟ್ಟು ಕೆಲವರು ಪಕ್ಷ ಸೇರುತ್ತಾರೆ. ಆದರೆ, ಪಕ್ಷ ತತ್ವ, ಸಿದ್ಧಾಂತಗಳನ್ನು ಬಿಟ್ಟು ಬೇರೆ ಹಾದಿ ಹಿಡಿದಾಗ ಸಹಜವಾಗಿಯೇ ಮನಸ್ಸಿಗೆ ಬೇಸರವಾಗುತ್ತದೆ. ಒಂದು ತತ್ವದ ಮೇಲೆ ನಂಬಿಕೆ ಇಟ್ಟು ಶಾಣಪ್ಪ ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದು ಅವರು ಹೇಳಿದರು.
ನಮ್ಮ ಅಭಿವದ್ಧಿ ಕೆಲಸಗಳು ನಮ್ಮ ಕಾರ್ಯಕರ್ತರ ಪ್ರಚಾರ ಸಾಧನವಾಗಿದೆ. 48 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಎಂದಿಗೂ ಕಲಬುರಗಿ ಜನ ತಲೆ ಬಾಗಿಸುವಂತಹ ಕೆಲಸವನ್ನು ನಾನು ಮಾಡಿಲ್ಲ. ಸಂಸತ್ತಿನಲ್ಲಿಯೂ ತಲೆ ಎತ್ತಿ ಮಾತನಾಡಿದ್ದೇನೆಯೇ ಹೊರತು, ತಲೆ ತಗ್ಗಿಸಿ ಮಾತನಾಡಿಲ್ಲ ಎಂದು ಅವರು ಹೇಳಿದರು.
ಸಂವಿಧಾನ ಬದಲಾವಣೆ ಬಗ್ಗೆ ಯಾವ ಪಕ್ಷ, ಯಾವ ಮುಖಂಡರು ಮಾತನಾಡುತ್ತಾರೋ ಅವರ ವಿರುದ್ಧ ನಾನು ಇರುತ್ತೇನೆ. ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ಸೇರುತ್ತಿರುವುದಾಗಿ ಶಾಣಪ್ಪ ತಿಳಿಸಿದ್ದಾರೆ. ಶಾಣಪ್ಪ ನನಗಿಂತ ಐದು ವರ್ಷ ಹಿರಿಯರು. 82 ವರ್ಷವಾದರೂ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ದೇಶ ಭಕ್ತಿಯ ಮಾತುಗಳನ್ನಾಡುವ ನರೇಂದ್ರಮೋದಿ, ಕಾಂಗ್ರೆಸ್ ಪಕ್ಷ ದೇಶ ಭಕ್ತ ಪಕ್ಷ ಎಂಬುದನ್ನು ನೆನಪಿಟ್ಟುಕೊಳ್ಳಲಿ. ನಮ್ಮ ದೇಶದ ಮೇಲೆ ಪಾಕಿಸ್ತಾನ ದಾಳಿ ಮಾಡಿದಾಗ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯನ್ನು ಮೊಳಗಿಸಿದ್ದು ಕಾಂಗ್ರೆಸ್ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಎಂದು ಅವರು ಹೇಳಿದರು.
90 ಸಾವಿರ ಪಾಕಿಸ್ತಾನದ ಸೈನಿಕರನ್ನು ನಮ್ಮ ದೇಶದ ಸೇನೆಯ ಎದುರು ಶರಣಾಗುವಂತೆ ಮಾಡಿದ್ದು ಕಾಂಗ್ರೆಸ್ ಪ್ರಧಾನಿ ಇಂದಿರಾಗಾಂಧಿ. ಅದೇ ಕಾರಣಕ್ಕಾಗಿ ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿಯನ್ನು ‘ದುರ್ಗಾ ಮಾತೆ’ಗೆ ಹೋಲಿಸಿದ್ದನ್ನು ಮೋದಿ ಮರೆತಿದ್ದಾರೆ. ಇವರು ನಮಗೆ ದೇಶಭಕ್ತಿಯ ಪಾಠ ಹೇಳಲು ಬಂದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ನರೇಂದ್ರಮೋದಿ ನೇತೃತ್ವದ ಸರಕಾರದ ಸಾಧನೆ ಏನು? ಸದನದ ಒಳಗೆ ಐದು ವರ್ಷಗಳಲ್ಲಿ ಮೋದಿ ಮಾತನಾಡಿದ್ದು ಕೇವಲ 24 ಗಂಟೆ 25 ನಿಮಿಷ ಮಾತ್ರ. ದೇಶದ ಬಗ್ಗೆ ಎಷ್ಟು ಕಾಳಜಿ, ಕಳಕಳಿಯಿದೆ ಇವರಿಗೆ ಅನ್ನೋದು ಇದರಿಂದಲೇ ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಅವರ ಸಂಪುಟದ ಸಚಿವರು ಹೇಳಿಕೆ ನೀಡುತ್ತಾರೆ. ಅವರ ವಿರುದ್ಧ ಮೋದಿ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.







