ಬಿಜೆಪಿ ಅಭ್ಯರ್ಥಿಯಿಂದ ಮ್ಯಾಜಿಸ್ಟ್ರೇಟ್ ಮೇಲೆ ಹಲ್ಲೆ: ವಿಚಾರಣೆಗೆ ಆದೇಶ

ಇಟಾನಗರ(ಅರುಣಾಚಲ ಪ್ರದೇಶ),ಎ.1: ಕರ್ತವ್ಯ ನಿರತ ಮ್ಯಾಜಿಸ್ಟ್ರೇಟ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಿಜೆಪಿ ಅಭ್ಯರ್ಥಿ ಲೋಕಮ್ ಟಸ್ಸಾರ್ ಮತ್ತು ಅವರ ಬೆಂಬಲಿಗರ ವಿರುದ್ಧ ತನಿಖೆಗೆ ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ(ಡಿಇಓ)ಗಳು ತನಿಖೆಗೆ ಆದೇಶಿಸಿದ್ದಾರೆ.
ಡಿಇಒ ಸಂತೋಷಕುಮಾರ ರಾಯ್ ಅವರು ಜಿಲ್ಲೆಯ ಸಂಗ್ರಾಮ್ ವಲಯದಲ್ಲಿಯ ಲೀಲ್ ಗ್ರಾಮದ ಸಮೀಪ ಚುನಾವಣಾ ಕರ್ತವ್ಯದಲ್ಲಿದ್ದ ಮ್ಯಾಜಿಸ್ಟ್ರೇಟ್ ಜಿಲ್ ಗ್ಯಾಮರ್ ಅವರ ಮೇಲೆ ದೈಹಿಕ ಹಲ್ಲೆಯ ಕುರಿತು ತನಿಖೆಗೆ ಆದೇಶಿಸಿ ಶನಿವಾರ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಮಾ.24ರಂದು ವೃತ್ತ ಅಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳ ಉಪಸ್ಥಿತಿಯಲ್ಲಿ ಮ್ಯಾಜಿಸ್ಟ್ರೇಟ್ ಮೇಲೆ ಹಲ್ಲೆ ನಡೆಸಿದ್ದ ಟಸ್ಸಾರ್,ಅವರ ಖಾಸಗಿ ಭದ್ರತಾ ಅಧಿಕಾರಿ ಮತ್ತು ಇತರ ಬೆಂಬಲಿಗರ ವಿರುದ್ಧ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಂಗ್ರಾಮ್ ಉಪವಿಭಾಗಾಧಿಕಾರಿಗಳು ತನಿಖೆಯನ್ನು ನಡೆಸಲಿದ್ದು.ಎ.2ರೊಳಗೆ ಡಿಇಒಗೆ ವರದಿ ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ.





