ಸಚಿವೆ ಜಯಮಾಲಾ ರಾಜೀನಾಮೆಗೆ ಬಿಜೆಪಿ ಆಗ್ರಹ
ಬೆಂಗಳೂರು, ಎ. 1: ಚಿಕ್ಕಬಳ್ಳಾಪುರ ಮಕ್ಕಳ ಆಶ್ರಯ ಕೇಂದ್ರದ ನಾಲ್ವರು ಹೆಣ್ಣು ಮಕ್ಕಳನ್ನು ಭದ್ರತಾ ಸಿಬ್ಬಂದಿಯೇ ವೇಶ್ಯಾವಾಟಿಕೆಗೆ ದೂಡಿರುವ ಅಮಾನವೀಯ ಘಟನೆ ಹೊಣೆಹೊತ್ತು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸೋಮವಾರ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಜಯಮಾಲಾ ಅವರಿಗೆ ಮಕ್ಕಳ ಸುರಕ್ಷತೆಗಿಂತ ಚುನಾವಣೆಯೇ ಮುಖ್ಯವಾಗಿದೆ. ರಾಜ್ಯ ಸರಕಾರ ಮಕ್ಕಳ ಆಶ್ರಯ ಕೇಂದ್ರಗಳ ಸುರಕ್ಷತೆಗೆ ವಿಶೇಷ ಆಸ್ಥೆ ವಹಿಸಬೇಕು ಎಂದು ಆಗ್ರಹಿಸಿದರು.
ಸಂಸದ ಎಲ್.ಆರ್.ಶಿವರಾಮೇಗೌಡ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜಾತಿಯ ಬಗ್ಗೆ ಮಾತನಾಡುತ್ತಿದ್ದು, ಮೈತ್ರಿ ಪಕ್ಷದ ನಾಯಕಿಯ ಬಗ್ಗೆಯೂ ಅವರು ಇದೇ ರೀತಿಯಲ್ಲಿ ಮಾತನಾಡುವರೇ ಎಂದು ಪ್ರಶ್ನಿಸಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಕೀಳುಮಟ್ಟದ ರಾಜಕೀಯ ಸರಿಯಲ್ಲ. ಇದೇ ರೀತಿಯ ಮಾತುಗಳನ್ನು ಮುಂದುವರಿಸಿದರೆ ಮಹಿಳಾ ಮೋರ್ಚಾ ಬೀದಿಗಿಳಿದು ಪ್ರತಿಭಟಿಸಲಿದೆ ಎಂದು ಎಚ್ಚರಿಸಿದರು.
Next Story





