ಡೇಟಿಂಗ್ ಜಾಲತಾಣದಲ್ಲಿ 46 ಲಕ್ಷ ರೂ. ಪಂಗನಾಮ: ಆರೋಪ

ಮುಂಬೈ,ಎ.1: “ಯುವತಿಯರೊಂದಿಗೆ ಸಂಭಾಷಣೆ ನಡೆಸಬಹುದಾದ ಡೇಟಿಂಗ್ ಜಾಲತಾಣ ನನಗೆ 46 ಲಕ್ಷ ರೂ. ವಂಚಿಸಿದೆ” ಎಂದು 65ರ ಹರೆಯದ ವೃದ್ಧರೊಬ್ಬರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಾಡ್ ಉಪನಗರದ ನಿವಾಸಿಯಾಗಿರುವ ವೃದ್ಧ ಜನವರಿಯಲ್ಲಿ ಕುರಾರ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ವಂಚನೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೃದ್ಧ ನೀಡಿದ ದೂರಿನ ಪರಿಶೀಲನೆ ನಡೆಸಿದ ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಕುರಾರ್ ಪೊಲೀಸ್ ಠಾಣೆಯ ಹಿರಿಯ ನಿರೀಕ್ಷಕ ಉದಯ್ ರಾಜೇಶಿರ್ಕೆ ತಿಳಿಸಿದ್ದಾರೆ.
ವಿವಾಹಿತನಾಗಿರುವ ದೂರುದಾರರು ಯುವತಿಯರ ಜೊತೆ ಡೇಟಿಂಗ್ ಬಯಸಿ ಕಳೆದ ಮೇ ತಿಂಗಳಲ್ಲಿ ಡೇಟಿಂಗ್ ಜಾಲತಾಣದಲ್ಲಿ ನೋಂದಾಯಿಸಿಕೊಂಡಿದ್ದರು. ನಂತರ ವೃದ್ಧನಿಗೆ ಕರೆ ಮಾಡಿದ ಮಹಿಳೆಯೊಬ್ಬರು ಮೂರು ಯುವತಿಯರ ಭಾವಚಿತ್ರಗಳನ್ನು ತೋರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರ್ಷಕ್ಕೆ 25,500 ರೂ. ಡೇಟಿಂಗ್ ಶುಲ್ಕ ಪಾವತಿಸುವಂತೆ ತಿಳಿಸಲಾಗಿತ್ತು. ದೂರುದಾರರು ಶುಲ್ಕವನ್ನು ಕರೆ ಮಾಡಿದ ಮಹಿಳೆ ನೀಡಿದ ಬ್ಯಾಂಕ್ ಖಾತೆಗೆ ಪಾವತಿಸಿದ್ದರು. ನಂತರ ಇತರ ವಿವಿಧ ಸೇವೆಗಳನ್ನು ನೀಡುವ ಭರವಸೆ ನೀಡಿದ ಜಾಲತಾಣ ದೂರುದಾರರಿಗೆ ಅನೇಕ ಬಾರಿ ಹಣವನ್ನು ಜಮೆ ಮಾಡುವಂತೆ ಸೂಚಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.







