ಜರ್ಮನಿಯಲ್ಲಿ ಪ್ರಶಾಂತ್ ಬಸ್ರೂರು ಹತ್ಯೆ ಪ್ರಕರಣ: ವಿನಯ ಪಾಸ್‌ಪೊರ್ಟ್ ನವೀಕರಣ: ನಾಲ್ವರು ಜರ್ಮನಿಗೆ
ಉಡುಪಿ, ಎ.1: ಜರ್ಮನಿಯ ಮ್ಯೂನಿಚ್ ನಗರದಲ್ಲಿ ಕುಂದಾಪುರ ಮೂಲದ ಪ್ರಶಾಂತ್ ಬಸ್ರೂರು (51) ಹತ್ಯೆ ಮತ್ತು ಪತ್ನಿ ಸ್ಮಿತಾ (40) ಗಂಭೀರ ಗಾಯ ಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಎರಡೂ ಕುಟುಂಬದವರು ಸೇರಿದಂತೆ ನಾಲ್ವರು ಬೆಂಗಳೂರಿನಿಂದ ಜರ್ಮನಿಗೆ ತೆರಳಲಿದ್ದಾರೆ.
ಮೃತ ಪ್ರಶಾಂತ್ ತಾಯಿ ವಿನಯ (73) ಹಾಗೂ ಸ್ಮಿತಾ ತಂದೆ ಡಾ. ಚಂದ್ರ ಮೌಳಿ ಹಾಗೂ ತಾಯಿ ವಿದ್ಯಾ ಜರ್ಮನಿಗೆ ಹೊರಡಲಿದ್ದು, ಇವರೊಂದಿಗೆ ರಜೆಯಲ್ಲಿ ಊರಿಗೆ ಬಂದಿರುವ ಪ್ರಶಾಂತ್ ಗೆಳೆಯ ಬೈಂದೂರಿನ ಗಣೇಶ್ ಎಂಬವರು ಕೂಡ ಹೊರಡಲಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.
ವಿನಯ ಅವರ ಪಾಸ್‌ಪೋರ್ಟ್ ಅವಧಿಯು ಎ.14ಕ್ಕೆ ಮುಗಿದ ಹಿನ್ನೆಲೆ ಯಲ್ಲಿ ತುರ್ತು ನವೀಕರಣಗೊಳಿಸಲು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರ ನೆರವಿಗೆ ಬಂದಿದ್ದರು. ಇಂದು ಜಯಪ್ರಕಾಶ್ ಹೆಗ್ಡೆ ವಿನಯ ಹಾಗೂ ಅವರ ಮಗ ಪ್ರಭಾತ್ ಜೊತೆ ಪಾಸ್‌ಪೋರ್ಟ್ ಕಚೇರಿಯಲ್ಲಿಯೇ ನಿಂತು ನವೀಕರಣ ಕಾರ್ಯ ನಡೆಸಿದರು.
ಮಧ್ಯಾಹ್ನ ಮೂರು ಗಂಟೆಯೊಳಗೆ ಎಲ್ಲ ಕಾರ್ಯ ಮುಗಿದಿದ್ದು, ವಿನಯ ಅವರ ಪಾಸ್‌ಪೊರ್ಟ್ ನವೀಕರಣಗೊಳಿಸಲಾಯಿತು. ನಾಳೆ ಬೆಳಗ್ಗೆ ವೀಸಾ ಹಾಗೂ ಟಿಕೆಟ್ ಕೂಡ ಅಂತಿಮಗೊಂಡಿದ್ದು, ಸಂಜೆ ವೇಳೆ ಇವರು ನಾಲ್ವರು ಜರ್ಮನಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
‘ವಿನಯ ಅವರ ಪಾಸ್‌ಪೊರ್ಟ್ ಯಾವುದೇ ಸಮಸ್ಯೆ ಇಲ್ಲದೆ ನವೀಕರಣ ಮಾಡಲಾಗಿದೆ. ಅದೇ ರೀತಿ ಟ್ರಾವೆಲಿಂಗ್ ಇನ್ಸುರೆನ್ಸ್ ಕೂಡ ನವೀಕರಿಸ ಲಾಗಿದೆ. ವೀಸಾ ವ್ಯವಸ್ಥೆ ಕೂಡ ಆಗಿದ್ದು, ನಾಳೆ ಹೊರಡುವುದು ದೃಢಪಟ್ಟಿದೆ’ ಎಂದು ಮಾಜಿ ಸಂಸದ ಜಯ್ರಕಾಶ್ ಹೆಗ್ಡೆ ಪತ್ರಿಕೆಗೆ ತಿಳಿಸಿದ್ದಾರೆ.







