ಭಾರತೀಯನಾಗುವುದಕ್ಕಿಂತ ಗೋವಾಂಕರ್ ಆಗಿರುವುದು ಮುಖ್ಯ ಎಂದ ಗೋವಾ ಡಿಸಿಎಂ !

ಪಣಜಿ, ಎ.1: ಗೋವಾದಲ್ಲಿ ಗೋವಾಂಕರ್ (ಗೋವಾ ನಿವಾಸಿಗಳು) ಆಗಿರುವುದು ಭಾರತೀಯನಾಗಿರುವುದಕ್ಕಿಂತ ಹೆಚ್ಚು ಮಹತ್ವದ್ದಾಗಿದೆ ಎಂದು ಗೋವಾದ ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯ್ ಹೇಳಿದ್ದಾರೆ.
ಪಣಜಿಯಲ್ಲಿ ಗೋವಾ ನೇಪಾಳಿ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸರ್ದೇಸಾಯ್, ಗೋವಾ ನಿವಾಸಿಗಳ ವಿಶಿಷ್ಟ ಜೀವನಕ್ರಮವನ್ನು ನೀವು ಸ್ವೀಕರಿಸಬೇಕು. ಗೋವಾದಲ್ಲಿ ಗೋವಂಕಾರ್ ಅಥವಾ ಗೋವನ್ನರಾಗಿರುವುದು ಭಾರತೀಯನಾಗಿರುವುದಕ್ಕಿಂತ ಹೆಚ್ಚು ಮಹತ್ವದ್ದಾಗಿದೆ ಎಂದು ಹೇಳಿದರು.
“ದೇಶದ ಉಳಿದ ಪ್ರದೇಶಗಳಿಗಿಂತ ಗೋವಾ ಸ್ವಲ್ಪ ವಿಭಿನ್ನವಾಗಿದೆ. ನಮಗೆ ವಿಭಿನ್ನ ಅಸ್ತಿತ್ವ, ಭಾಷೆಯಿದೆ. ನಮ್ಮ ಸಂಸ್ಕೃತಿ ದೇಶದ ಇತರ ಭಾಗಗಳಿಗಿಂತ ವಿಭಿನ್ನವಾಗಿದೆ. ನಮ್ಮ ಇತಿಹಾಸವೂ ವಿಭಿನ್ನವಾಗಿದೆ. ಗೋವಾವು ಅತ್ಯಂತ ಸಹಿಷ್ಣು, ಉದಾರ ಭಾವನೆಯ, ಜಾತ್ಯಾತೀತ ಮತ್ತು ಪ್ರಗತಿಪರ ರಾಜ್ಯವಾಗಿದೆ. ಪ್ರವಾಸೋದ್ಯಮ, ಆತಿಥ್ಯ ಮತ್ತು ಸ್ನೇಹಮಯಿ ಜನರ ರಾಜ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
“ಗೋವಾವು ಗೋವಾ ಆಗಿಯೇ ಉಳಿಯಬೇಕು. ಇದು ಕೇವಲ ದೇಶದ ಮತ್ತೊಂದು ಭಾಗ ಎಂದು ಗುರುತಿಸಲ್ಪಡಬಾರದು. ಈ ರಾಜ್ಯದ ಅನನ್ಯ ಅಸ್ಮಿತೆಯನ್ನು ನಾವು ಉಳಿಸಿಕೊಳ್ಳಬೇಕಿದೆ” ಎಂದು ಸರ್ದೇಸಾಯ್ ಹೇಳಿದರು. ಸರ್ದೇಸಾಯ್ ಅಧ್ಯಕ್ಷರಾಗಿರುವ ಗೋವಾ ಫಾರ್ವರ್ಡ್ ಪಾರ್ಟಿ ಎಂಬ ಪ್ರಾದೇಶಿಕ ಪಕ್ಷವು ಗೋವಾ ರಾಜ್ಯದ ವಿಶಿಷ್ಟ ಅನನ್ಯತೆಯನ್ನು ಉಳಿಸಿಕೊಳ್ಳಬೇಕೆಂದು ಬಲವಾಗಿ ಆಗ್ರಹಿಸುತ್ತಾ ಬಂದಿದೆ.





