ಹಬ್ಬ ಆಚರಿಸಿದಂತೆ ಮತ ಚಲಾಯಿಸಿ: ನ್ಯಾ.ಡಿ.ವಿ.ಶೈಲೇಂದ್ರಕುಮಾರ್
ಬೆಂಗಳೂರು, ಎ.1: ಚುನಾವಣೆ ಎನ್ನುವುದು ಕಣದಲ್ಲಿ ಸ್ಪರ್ಧಿಸಿರುವ ಜನ ನಾಯಕರಿಗೆ ಮಾತ್ರವಲ್ಲ, ಬದಲಾಗಿ ಮತದಾನದ ಹಕ್ಕು ಹೊಂದಿರುವ ಎಲ್ಲರಿಗೂ ಎಂಬುದನ್ನು ಮನಗಾಣಬೇಕು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಇಂದಿಲ್ಲಿ ಹೇಳಿದರು.
ಸೋಮವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಸಭಾಂಗಣದಲ್ಲಿ, ವಾರ್ತಾ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಮಾಸಪತ್ರಿಕೆ ಹಾಗೂ ಚುನಾವಣಾ ವಿಶೇಷಾಂಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮತದಾನ ದಿನದಂದು ರಜೆ ನೀಡಿದರೂ ಮತಗಟ್ಟೆಗೆ ಬಾರದೇ ಪ್ರವಾಸ ಹೋಗುತ್ತಾರೆ. ಆದರೆ, ಹಬ್ಬದ ದಿನದಂದು ಮನೆಯಲ್ಲಿಯೇ ಇದ್ದು, ಹಬ್ಬ ಆಚರಿಸಿದಂತೆ ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತಚಲಾಯಿಸಿ ನಾಗರಿಕನ ಪವಿತ್ರ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಹೇಳಿದರು.
ಪೊಲೀಸ್ ಠಾಣೆಗಳಿಗೆ ಹೋಗುವ ಜನ ಸಾಮಾನ್ಯರನ್ನು ಅಲ್ಲಿನ ಸಿಬ್ಬಂದಿ ಗೌರವಯುತವಾಗಿ ಕಾಣುವುದಿಲ್ಲ ಎಂಬ ಮಾತು ಜನ ಜನಿತವಾಗಿದೆ. ಆದರೆ, ಕಪ್ಪು ಕೋಟು ಧರಿಸಿ ಪೊಲೀಸ್ ಠಾಣೆಯನ್ನು ಪ್ರವೇಶಿಸುವ ವಕೀಲರನ್ನು ಮಾತ್ರ ಪೊಲೀಸರು ಗೌರವಿಸುತ್ತಾರೆ ಎಂಬುದು ಎಲ್ಲರೂ ಗಮನಿಸಬಹುದಾದ ವಾಸ್ತವಾಂಶವಾಗಿದೆ. ಅಂದರೆ ತಿಳುವಳಿಕೆ ಇದ್ದವರಿಗೆ ಈ ಜಗತ್ತಿನಲ್ಲಿ ಮನ್ನಣೆ ದೊರೆಯುತ್ತದೆ ಎಂಬುದು ವ್ಯಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ಸಂವಿಧಾನವನ್ನು ಅಧ್ಯಯಿನಿಸಿ ಅರಿವು ಹೊಂದುವುದು ಅತೀ ಮುಖ್ಯ ಎಂದು ಕರೆ ನೀಡಿದರು.
ಹಿರಿಯ ಪತ್ರಕರ್ತ ಅರಕೆರೆ ಜಯರಾಂ ಮಾತನಾಡಿ, 1952ರಿಂದ ಈವರೆಗೆ ನಡೆದಿರುವ 16 ಲೋಕಸಭಾ ಚುನಾವಣಾ ಪ್ರಕ್ರಿಯೆಗಳಲ್ಲಿ ಮಾತ್ರವಲ್ಲದೆ ವರದಿಗಾರಿಕೆಯ ವಿಧಾನದಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ. ನೆರೆಯ ಪಾಕಿಸ್ತಾನದಂತಹ ರಾಷ್ಟ್ರದಲ್ಲೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿ ಪದವೀಧರನಾಗಿರಬೇಕು ಎಂಬ ಮಾನದಂಡವಿದೆ. ಆದರೆ, ನಮ್ಮ ದೇಶದಲ್ಲಿ ವಯೋಮಾನ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ನಮೂದಾಗಿರಬೇಕೆಂಬುದೇ ಅರ್ಹತೆಯಾಗಿದೆ. ಒಂದೆಡೆ ಚುನಾವಣಾ ವೆಚ್ಚಗಳೂ ಕೂಡ ತೀವ್ರ ಏರಿಕೆ ಕಂಡಿವೆ. ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದರೆ ಹಣವಂತರೇ ಆಗಬೇಕು ಎಂಬ ಅಲಿಖಿತ ನಿಯಮ ಜಾರಿಗೆ ಬಂದಂತಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಭೃಂಗೀಶ್, ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಸೇರಿದಂತೆ ಪ್ರಮುಖರಿದ್ದರು.







