ಕೊಯ್ನ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲು ಬಿಎಸ್‌ವೈ ಮನವಿ

ಬೆಂಗಳೂರು, ಎ.1: ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಜನ ಜನುವಾರುಗಳಿಗೆ ನೀರಿಲ್ಲದೆ ತತ್ತರಿಸುವಂತಾಗಿದೆ. ಹೀಗಾಗಿ ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ರಾಜ್ಯದ ಕೃಷ್ಣಾ ನದಿಗೆ ಕೂಡಲೇ 4 ಟಿಎಂಸಿ ನೀರು ಹರಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ತೀವ್ರ ಸ್ವರೂಪದ ಬರಗಾಲ ಇದೆ. ದಿನದಿಂದ ದಿನಕ್ಕೆ ಜನಸಾಮಾನ್ಯರ, ದನಕರುಗಳ ಸ್ಥಿತಿ ಕರುಣಾಜನಕವಾಗುತ್ತಿದೆ. ಪ್ರಭಾಕರ್ ಕೋರೆ ನೇತೃತ್ವದಲ್ಲಿ ಬಿಜೆಪಿ ನಿಯೋಗ ನಿಮ್ಮನ್ನು ಭೇಟಿ ಮಾಡಲು ಸಮಯ ನೀಡಿ. ಕೂಡಲೇ ಕೊಯ್ನ ಜಲಾಶಯದಿಂದ ಕೃಷ್ಣಾ ನದಿಗೆ 4 ಟಿಎಂಸಿ ನೀರನ್ನು ಬಿಡಿ ಎಂದು ಪತ್ರದ ಮೂಲಕ ಕೋರಿದ್ದಾರೆ.
ಈ ಹಿಂದೆಯೂ ನಮ್ಮ ಮನವಿಗೆ ನೀವು ಸ್ಪಂದಿಸಿ ನೀರನ್ನು ಬಿಟ್ಟಿದ್ದೀರಿ. ನಮಗೆ ಸಮಸ್ಯೆ ಆದಾಗ ಸದಾ ಕರ್ನಾಟಕದ ಪರ ನಿಂತಿದ್ದೀರಿ. ಭೀಕರ ಬರದ ಹಿನ್ನೆಲೆಯಲ್ಲಿ ನೀವು ನಮ್ಮ ನೆರವಿಗೆ ಬರಬೇಕಿದೆ ಎಂದು ಯಡಿಯೂರಪ್ಪ ಮಾ.30ರಂದು ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿದ್ದಾರೆ.





