ನೇಪಾಳದಲ್ಲಿ ಪ್ರಬಲ ಮಳೆ ಬಿರುಗಾಳಿ; 25 ಸಾವು
ಕಠ್ಮಂಡು (ನೇಪಾಳ), ಎ. 2: ದಕ್ಷಿಣ ನೇಪಾಳದ ಹಲವಾರು ಗ್ರಾಮಗಳಿಗೆ ಪ್ರಬಲ ಮಳೆ ಬಿರುಗಾಳಿ ಬೀಸಿದ್ದು ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ ಹಾಗೂ 400 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬಾರ ಮತ್ತು ಪಾರ್ಸ ಜಿಲ್ಲೆಗಳ ಹಲವು ಗ್ರಾಮಗಳಿಗೆ ರವಿವಾರ ಸಂಜೆ ಬಿರುಗಾಳಿ ಬೀಸಿತು ಎಂದು ನೇಪಾಳ ಗೃಹ ಸಚಿವಲಯದ ಅಧಿಕಾರಿಗಳು ಹೇಳಿದರು.
ಕಠ್ಮಂಡುವಿನಿಂದ ದಕ್ಷಿಣಕ್ಕೆ 128 ಕಿ.ಮೀ. ದೂರದಲ್ಲಿರುವ ಬಾರ ಜಿಲ್ಲೆಯಲ್ಲಿ 24 ಮಂದಿ ಮೃತಪಟ್ಟರೆ, ಪಾರ್ಸ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.
ಗಾಯಗೊಂಡವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಷ್ಟ್ರೀಯ ತುರ್ತು ಕಾರ್ಯಾಚರಣೆ ಕೇಂದ್ರ ಹೇಳಿದೆ.
ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುವುದಕ್ಕಾಗಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story