ಚುನಾವಣಾಧಿಕಾರಿಗಳ ವಿರುದ್ಧ ಆರೋಪಕ್ಕೂ ಮುನ್ನ ಕಾನೂನು ತಿಳಿಯಿರಿ: ಸುಮಲತಾಗೆ ಭೋಜೇಗೌಡ ತಿರುಗೇಟು

ಚಿಕ್ಕಮಗಳೂರು, ಎ.2: ಚುನಾವಣಾಧಿಕಾರಿಗಳ ಮೇಲೆ ಸರಕಾರದ ಹಿಡಿತ ಇರುವುದಿಲ್ಲ. ಬ್ಯಾಲೆಟ್ ಪತ್ರಗಳಲ್ಲಿ ಅಭ್ಯರ್ಥಿಗಳ ಹೆಸರು, ಚಿಹ್ನೆಗಳು ಹೀಗೆ ಇರಬೇಕೆಂದು ಚುನಾವಣಾ ಆಯೋಗ ರಾಜ್ಯ ಸರಕಾರ ಅಥವಾ ಸಿಎಂ ಅಪ್ಪಣೆ ಕೇಳಿ ಮುದ್ರಣ ಮಾಡುವುದಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಎ.ಸುಮಲತಾ ಅವರು ಆರೋಪ ಮಾಡುವ ಮೊದಲು ಕಾನೂನು ತಿಳಿದುಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಲ್.ಭೋಜೇಗೌಡ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಲೆಟ್ ಪೇಪರ್ ನಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಮೊದಲು ಬಂದಿರುವ ಹಿನ್ನೆಲೆಯಲ್ಲಿ ಚುನಾವಣ ಅಧಿಕಾರಿಗಳು ಅಕ್ರಮ ನಡೆಸಿದ್ದಾರೆ ಎಂಬ ಸುಮಾಲತ ಅವರ ಆರೋಪಕ್ಕೆ ತೀರುಗೇಟು ನೀಡಿದ ಭೋಜೇಗೌಡ, ಅಕ್ರಮ ನಡೆದಿದ್ದರೆ ನ್ಯಾಯಲಯದಲ್ಲಿ ಪ್ರಶ್ನಿಸಲಿ, ಸಾರ್ವಜನಿಕವಾಗಿ ಇಲ್ಲ ಸಲ್ಲದ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 38ರ ಪ್ರಕಾರ ನಾಮಪತ್ರ ಪರಿಶೀಲನೆ ನಂತರ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಲಾಗುತ್ತದೆ. ಪಟ್ಟಿ ತಯಾರಿಸುವಾಗ ಅಭ್ಯರ್ಥಿಯ ರಾಜಕೀಯವಾಗಿ ಗುರುತಿಸಿಕೊಂಡ ಪಕ್ಷ, ಪಕ್ಷದ ಸ್ಥಾನ, ನಂತರ ಅವರ ಹೆಸರಿನ ಅಕ್ಷರದ ಆಧಾರದ ಮೇಲೆ ಪಟ್ಟಿ ತಯಾರು ಮಾಡಲಾಗುತ್ತದೆ. ಉಳಿದ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳಾಗಿ ಗುರುತಿಸಿಕೊಳ್ಳುತ್ತಾರೆ. ಈ ನಿಯಮ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 38ರಲ್ಲಿ ನಮೂದಾಗಿದೆ ಎಂದ ಅವರು, ಸುಮಲತಾ ಅವರಿಗೆ ಈ ಸಾಮಾನ್ಯ ಜ್ಞಾನ ಇಲ್ಲದಿರುವುದು ಬೇಸರದ ಸಂಗತಿ ಎಂದು ಟೀಕಿಸಿದರು.
ಚುನಾವಣಾಧಿಕಾರಿಗಳ ಮೇಲೆ ಪ್ರಭಾವ ಬೀರಲಾಗಿದೆ. ಅಕ್ರಮ ನಡೆದಿದೆ ಎಂದು ಸುಮಲತಾ ಅವರು ಆರೋಪ ಮಾಡುವ ಮೊದಲು ಕಾನೂನಿನ ಸಾಮಾನ್ಯಜ್ಞಾನ ಅರಿತುಕೊಳ್ಳಬೇಕು ಅಥವಾ ಪರಿಣಿತರಿಂದ ತಿಳಿದುಕೊಳ್ಳಬೇಕು, ಇದು ಸುಮಲತಾ ಅವರಿಗೆ ನನ್ನ ಸಲಹೆ ಎಂದ ಅವರು, ಇಷ್ಟು ಕಾನೂನಿನ ಅರಿವು ಇಲ್ಲದಿರುವುದು ಜನತೆಗೆ ಮಾಡುವ ಅವಮಾನ. ಇದಕ್ಕೆ ಜನರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು.
ಸುಮಾಲತಾ ಹಾಗೂ ಅವರ ಚುನಾವಣಾ ಏಜೆಂಟ್ ಮದನ್ ಕುಮಾರ್ ಅವರು ಚುನಾವಣಾ ಅಧಿಕಾರಿಗಳಲ್ಲಿ ಈ ಸಂಬಂಧ ದಾಖಲೆ ಕೇಳಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ವೀಕ್ಷಕರಾಗಿ ನೇಮಕವಾಗಿರುವ ಚುನಾವಣಾ ಅಧಿಕಾರಿ ರಣಜಿತ್ ಕುಮಾರ್ ಎ. ಸುಮಲತಾ ಆರೋಪಕ್ಕೆ ಐದು ಪುಟಗಳ ಉತ್ತರ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನ್ಯಾಯಾಲಯದಲ್ಲಿ ದೂರು ದಾಖಲಿಸಲಿ, ಅದನ್ನು ಬಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ತಿರಸ್ಕಾರಗೊಳ್ಳುತ್ತಿತ್ತು, ಅಧಿಕಾರಿಗಳು ಏನೋ ಅಕ್ರಮ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಹೆಸರು ಬ್ಯಾಲೆಟ್ ಪೇಪರ್ ನಲ್ಲಿ ಮೊದಲು ಹೇಗೆ ಬಂತು. ಚುನಾವಣ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಸುಮಾಲತ ಬೆಂಬಲಿತ ಪಕ್ಷದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೇರಿದಂತೆ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದು, ರಾಜ್ಯದ ಜನತೆಯನ್ನು ಪ್ರತಿನಿಧಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದು ಶೋಭೆ ತರುವಂತದಲ್ಲ, ಈ ರೀತಿ ಜನತೆಯನ್ನು ದಾರಿ ತಪ್ಪಿಸುವುದರಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದರು.
ಕ್ಷೇತ್ರದ ಅಭ್ಯರ್ಥಿಗೆ ಉತ್ತಮ ಪ್ರತಿಕ್ರಿಯೆ:
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಸುತ್ತಿನ ಪ್ರಚಾರ ಕಾರ್ಯ ನಡೆಸಿದ್ದು, ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಜೆಪಿ ಪಕ್ಷದಿಂದ ಶೋಭಾ ಕರಂದ್ಲಾಜೆ ಅವರು ಕಣಕ್ಕಿಳಿದ್ದಿದ್ದು, ಅವರ ಪಕ್ಷದಲ್ಲಿಯೇ ಅಭ್ಯರ್ಥಿಯ ವಿರುದ್ಧ ಅಸಮಾಧಾನವಿದೆ. “ಗೋ ಬ್ಯಾಕ್ ಶೋಭಾ” ಎಂದು ಸ್ವಪಕ್ಷೀಯರೇ ಹೇಳುತ್ತಿರುವುದು ಮೈತ್ರಿ ಪಕ್ಷದ ಅಭ್ಯರ್ಥಿಗೆ ವರದಾನವಾಗಿದೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರದಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಸಂಸದರು ಮೋದಿ ಹೆಸರಿನ ಜಪಮಾಡಿ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಮೋದಿ ಮೋದಿ ಎಂದು ಜಪಮಾಡಲು ಕ್ಷೇತ್ರದಲ್ಲಿ ಮೋದಿ ಬಂದು ಕೆಲಸ ಮಾಡುತ್ತಾರಾ? ಎಂದ ಪ್ರಶ್ನಿಸಿದ ಎಸ್.ಎಲ್.ಭೋಜೇಗೌಡ, ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಕೆಲಸ ಮಾಡದೆ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಎಂ.ಡಿ.ರಮೇಶ್, ಚಂದ್ರಪ್ಪ, ಜಯರಾಜ್ ಅರಸ್, ವಿನಾಯಕ, ದಿನೇಶ್, ಲಕ್ಷ್ಮಣ್‍ಗೌಡ ಮತ್ತಿತರರು ಉಪಸ್ಥಿತರಿದ್ದರು.







