ಕೇರಳಕ್ಕೆ ಅಕ್ರಮ ಮದ್ಯ ಸಾಗಾಟ ಯತ್ನ: 28 ಲಕ್ಷ ರೂ.ಮೌಲ್ಯದ ಮಾಲು ವಶ- ಇಬ್ಬರ ಬಂಧನ

ಮಡಿಕೇರಿ,ಎ.2: ಕೊಡಗು ಜಿಲ್ಲೆಯ ಮೂಲಕ ಕೇರಳ ರಾಜ್ಯಕ್ಕೆ ಸಾಗಾಟ ಮಾಡಲಾಗುತ್ತಿದ್ದ ಭಾರೀ ಪ್ರಮಾಣದ ಅಕ್ರಮ ಮದ್ಯವನ್ನು ಕೊಡಗು ಜಿಲ್ಲಾ ಅಬಕಾರಿ ಇಲಾಖೆ ಸಿನಿಮೀಯ ಮಾದರಿಯಲ್ಲಿ ಪತ್ತೆಹಚ್ಚಿದ್ದು ಮದ್ಯ, ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವಶಕ್ಕೆ ಪಡೆಯಲಾದ ಮದ್ಯ ಮತ್ತು ವಾಹನದ ಒಟ್ಟು ಮೌಲ್ಯ 28 ಲಕ್ಷ ರೂ.ಗಳಾಗಿದ್ದು, ಗಂಭೀರ ಪ್ರಕರಣ ದಾಖಲಿಸಿಕೊಂಡು ಮದ್ಯ ಸಾಗಾಟದ ಹಿಂದಿರುವ ಕಾಣದ ಕೈಗಳಿಗಾಗಿ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಈ ಅಕ್ರಮ ಮದ್ಯವನ್ನು ಮಹಾರಾಷ್ಟ್ರ, ಬೆಂಗಳೂರು, ಮೈಸೂರು, ಪೆರುಂಬಾಡಿ ಮಾರ್ಗವಾಗಿ ಕೇರಳದ ವಯನಾಡು ಕಡೆಗೆ ಸಾಗಾಟ ಮಾಡಲು ಯತ್ನಿಸಿರುವ ಬಗ್ಗೆ ಅಬಕಾರಿ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದಲೇ ಜಿಲ್ಲೆಯಾದ್ಯಂತ ಹೈಅಲರ್ಟ್ ಆಗಿದ್ದ ಅಬಕಾರಿ ಇಲಾಖೆ ಜಿಲ್ಲೆಯಲ್ಲಿ 14 ಚೆಕ್‍ಪೋಸ್ಟ್ ಗಳನ್ನು ಅಳವಡಿಸಿ ಚುನಾವಣಾ ಅಕ್ರಮಗಳ ಬಗ್ಗೆ ಹದ್ದಿನ ಕಣ್ಣಿಟ್ಟಿತ್ತು. ಕಾಸರಗೋಡು, ವಯನಾಡು, ಕಣ್ಣೂರು ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಈ ನಡುವೆಯೇ, ಬೆಂಗಳೂರಿನಿಂದ ಕೊಡಗು ಜಿಲ್ಲೆಯ ಮೂಲಕ ಲಾರಿಯಲ್ಲಿ ಭಾರೀ ಪ್ರಮಾಣದ ಅಕ್ರಮ ಮದ್ಯ ಸಾಗಿಸುವ ಬಗ್ಗೆ ಕೊಡಗು ಅಬಕಾರಿ ಇಲಾಖೆಗೆ ಕಳೆದ 1 ವಾರದ ಹಿಂದೆಯೇ ಖಚಿತ ಮಾಹಿತಿ ಇತ್ತು ಎಂದು ತಿಳಿದು ಬಂದಿದೆ.
ಎಂದಿನಂತೆ ಅಬಕಾರಿ ಅಧಿಕಾರಿಗಳು ಇಂದು ಬೆಳಗ್ಗೆ ವಿರಾಜಪೇಟೆ ಸಮೀಪದ ಪೆರುಂಬಾಡಿ ಚೆಕ್‍ಪೋಸ್ಟ್ ಮೂಲಕ ಕೇರಳ ಮತ್ತು ಕೊಡಗು ಜಿಲ್ಲೆಗೆ ಹೋಗಿ ಬರುತ್ತಿರುವ ಪ್ರತಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಮಹಾರಾಷ್ಟ್ರ ನೋಂದಣಿ ಹೊಂದಿದ ಅಶೋಕ್ ಲೈಲ್ಯಾಂಡ್ ಕಂಪೆನಿಯ ಲಾರಿ ತಡೆದು ತಪಾಸಣೆ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಲಕ್ಷಾಂತರ ಮೌಲ್ಯದ ವಿವಿಧ ಬ್ರ್ಯಾಂಡ್‍ಗಳ 250 ಬಾಕ್ಸ್ ಗಳಷ್ಟು ಮದ್ಯವನ್ನು ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿ, ಜಪ್ತಿ ಮಾಡಿದ್ದಾರೆ. ಲಾರಿಯ ಚಾಲಕ ಶಂಕರ ಪೂಜಾರಿ ಮತ್ತು ಕ್ಲೀನರ್ ರಾಜೇಶ್ ಎಂಬವರನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು, ಗಂಭೀರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಇಲ್ಲಿಯವರೆಗೆ 72 ಲಕ್ಷ ರೂ.ಮೌಲ್ಯದ ಮಾಲು ವಶ
ಪ್ರತಿಷ್ಟಿತ ಸಂಸ್ಥೆಯ ಹೆಸರನ್ನು ಲಾರಿಯಲ್ಲಿ ಬಳಸಿಕೊಂಡಿದ್ದು, ಸಂಸ್ಥೆಗೂ ಅಕ್ರಮ ಮದ್ಯ ಸಾಗಿಸುತ್ತಿದ್ದ ಲಾರಿಗೂ ಯಾವುದೇ ಸಂಭಂದವಿಲ್ಲ ಎಂದು ಜಿಲ್ಲಾ ಅಬಕಾರಿ ಆಯುಕ್ತ ವೀರಣ್ಣ ಬಾಗೇವಾಡಿ ಸ್ಪಷ್ಟಪಡಿಸಿದರು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಾದ್ಯಂತ ದಾಳಿ ನಡೆಸಿ, 31 ಗಂಭೀರ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟದ 186 ಪ್ರಕರಣ ಮತ್ತು ಮದ್ಯ ಸನ್ನದುಗಳ ಮೇಲೆ ದಾಳಿ ನಡೆಸಿ 67 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 4595 ಲೀ. ಮದ್ಯ, 3948 ಲೀ. ಬಿಯರ್, 6 ವಾಹನ ಜಪ್ತಿ ಸೇರಿದಂತೆ ಒಟ್ಟು 72 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕುಟ್ಟ ಗ್ರಾಮದಲ್ಲಿ ಗಾಂಜಾ ಮಾರುತ್ತಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿ 60ಗ್ರಾಂ. ಗಾಂಜಾ ಮತ್ತು ಓರ್ವ ಮಹಿಳೆಯನ್ನೂ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಜಿಲ್ಲಾ ಅಬಕಾರಿ ಆಯುಕ್ತ ವೀರಣ್ಣ ಬಾಗೇವಾಡಿ ಮಾಹಿತಿ ನೀಡಿದರು.







