ಪ್ರಧಾನಿ ಮೋದಿ ವಿರುದ್ಧ ಐವಾನ್ ಡಿ’ಸೋಜಾ ವಾಗ್ದಾಳಿ

ಬೆಂಗಳೂರು, ಎ.2: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದೊಂದಿಗೆ ಕೇರಳ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿರುವ ಬಗ್ಗೆ ಟೀಕಿಸಿರುವ ಪ್ರಧಾನಿ ನರೇಂದ್ರಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಸದಸ್ಯ ಐವಾನ್ ಡಿ’ಸೋಜಾ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಯನಾಡಿನಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ರಾಹುಲ್ ಗಾಂಧಿ, ಅಲ್ಲಿಗೆ ಹೋಗುತ್ತಿದ್ದಾರೆ ಎನ್ನುವ ಮೂಲಕ ಪ್ರಧಾನಿ ಮೋದಿ ತಮ್ಮ ದಿವಾಳಿತನ ಪ್ರದರ್ಶಿಸಿದ್ದಾರೆ ಎಂದರು.
ದೇಶದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾದ ಮತದಾನದ ಹಕ್ಕನ್ನು ನೀಡಿದೆ. ಅಲ್ಪಸಂಖ್ಯಾತರ ಮತಗಳಿಗೆ ಗೌರವ, ಬೆಲೆ ಇಲ್ಲವೇ? ಒಬ್ಬ ಪ್ರಧಾನಿಯಾಗಿ ಸಮಾಜವನ್ನು ಒಡೆಯುವ ಮಾತುಗಳನ್ನು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಐವಾನ್ ಡಿ’ಸೋಜಾ ಹೇಳಿದರು.
ಮುಸ್ಲಿಮರು, ಕ್ರೈಸ್ತರು, ಜೈನರು, ಸಿಖ್ಖರು, ಪಾರ್ಸಿಗಳು ಸೇರಿದಂತೆ ದೇಶದಲ್ಲಿ ಶೇ.17ರಷ್ಟು ಅಲ್ಪಸಂಖ್ಯಾತರಿದ್ದಾರೆ. ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಬಿಜೆಪಿ ಎಂದಿಗೂ ನೀಡಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಿದ್ದು ಕೇವಲ 200 ಕೋಟಿ ರೂ.ಮಾತ್ರ, ಸಿದ್ದರಾಮಯ್ಯ ಸರಕಾರದಲ್ಲಿ ಈ ಮೊತ್ತ 2850 ಕೋಟಿ ರೂ.ಗಳಿಗೆ ಹೆಚ್ಚಳವಾಯಿತು ಎಂದು ಅವರು ಹೇಳಿದರು.
ದೇಶವನ್ನು ಧರ್ಮ, ಜಾತಿ ಹೆಸರಿನಲ್ಲಿ ಒಡೆಯಲು ಬಿಜೆಪಿ ಯತ್ನಿಸುತ್ತಿದೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳಿದ್ದರು. ಅವರ ವಿರುದ್ಧ ನರೇಂದ್ರಮೋದಿ ಯಾವ ಕ್ರಮ ಕೈಗೊಂಡರು ಎಂದು ಐವಾನ್ ಡಿ’ಸೋಜಾ ಪ್ರಶ್ನಿಸಿದರು.







