ಮಲೆನಾಡಿನಲ್ಲಿ ಮುಂದುವರೆದ ವರ್ಷಧಾರೆ
ರೈತರು, ಸಾರ್ವಜನಿಕರ ಮೊಗದಲ್ಲಿ ಮಂದಹಾಸ

ಚಿಕ್ಕಮಗಳೂರು, ಎ.2: ಕಾಫಿನಾಡಿನಲ್ಲಿ ಸತತ ನಾಲ್ಕನೇ ದಿನ ಮಳೆಯ ಸಿಂಚನವಾಗಿದ್ದು, ಮಂಗಳವಾರ ಸಂಜೆ ಮಲೆನಾಡು ವ್ಯಾಪ್ತಿಯ ತಾಲೂಕುಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದ ಬಗ್ಗೆ ವರದಿಯಾಗಿದೆ.
ಜಿಲ್ಲೆಯಾದ್ಯಂತ ಸುಡು ಬಿಸಿಲಿನಿಂದಾಗಿ ಸಾರ್ವಜನಿಕರು ಭಾರೀ ಸೆಕೆಯಿಂದಾಗಿ ಹೈರಾಣಾಗಿ ಹೋಗಿರುವುದು ಒಂದೆಡೆಯಾದರೆ, ರಣಬಿಸಿಲಿನಿಂದಾಗಿ ಕಾಫಿ, ಕಾಳು ಮೆಣಸು, ಅಡಿಕೆ ತೋಟಗಳು ಒಣಗಿ ಹೋಗುವ ಭೀತಿಯಿಂದಾಗಿ ಮಲೆನಾಡಿನ ರೈತರು ಕಂಗಾಲಾಗಿದ್ದರು. ತೋಟಗಳ ರಕ್ಷಣೆಗೆ ಲಕ್ಷಾಂತರ ರೂ.ವ್ಯಯಿಸಿ ಮೋಟರ್, ಡೀಸೆಲ್ ಪಂಪ್‍ಗಳ ಮೂಲಕ ಹಳ್ಳಕೊಳ್ಳಗಳಲ್ಲಿ ಲಭ್ಯವಿದ್ದ ನೀರನ್ನು ತೋಟಗಳಿಗೆ ಹಾಯಿಸಲು ಹರಸಾಹಸ ಪಡುತ್ತಿದ್ದರು. ರೈತರು, ಸಾರ್ವಜನಿಕರು ಸಾಮಾನ್ಯವಾಗಿ ಎಪ್ರಿಲ್ ತಿಂಗಳಲ್ಲಿ ಬೀಳುವ ಅಕಾಲಿಕ ಮಳೆಯ ನಿರೀಕ್ಷೆಯಲ್ಲಿದ್ದು, ಮಳೆರಾಯ ರೈತರ ನಿರೀಕ್ಷೆ ಸುಳ್ಳು ಮಾಡದಂತೆ ಕಳೆದ ನಾಲ್ಕು ದಿನಗಳಿಂದ ಸಂಜೆ ವೇಳೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ನಾಲ್ಕು ದಿನಗಳಿಂದ ಚಿಕ್ಕಮಗಳೂರು ಸೇರಿದಂತೆ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲವೆಡೆ ಧಾರಾಕಾರ ಮಳೆಯಾಗಿದ್ದರೆ, ಕೆಲವೆಡೆ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಮಂಗಳವಾರ ಮೂಡಿಗೆರೆ ತಾಲೂಕು ವ್ಯಾಪ್ತಿಯ ಕಿರುಗುಂದ, ಗೋಣಿಬೀಡು, ಜನ್ನಾಪುರ, ಹಾಂದಿ, ಬಣಕಲ್, ಕೊಟ್ಟಿಗೆಹಾರ, ಜಾವಳಿ, ಗಬ್ಗಲ್, ಕಳಸ, ಸಂಸೆ, ಹೊರನಾಡು, ಕುದುರೆಮುಖ ಭಾಗದಲ್ಲಿ ಗುಡುಗು, ಮಿಂಚು ಹಾಗೂ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿದೆ.
ಕೊಪ್ಪ ತಾಲೂಕಿನ ಜಯಪುರ, ಮೇಗುಂದ, ಬಸರೀಕಟ್ಟೆ, ಕೊಗ್ರೆ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದ್ದರೆ, ಎನ್.ಆರ್.ಪುರ ತಾಲೂಕಿನ ಮಾಗುಂಡಿ, ಬಾಳೆಹೊನ್ನೂರು, ಕಣತಿ, ಖಾಂಡ್ಯ ಮತ್ತಿತರ ಕಡೆಗಳಲ್ಲಿ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ. ಇನ್ನು ಚಿಕ್ಕಮಗಳೂರು ತಾಲೂಕು ಹಾಗೂ ಶೃಂಗೇರಿ ತಾಲೂಕು ವ್ಯಾಪ್ತಿಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಕಡೂರು ಹಾಗೂ ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣ ಇತ್ತಾದರೂ ಮಳೆ ಸುರಿದ ಬಗ್ಗೆ ವರದಿಯಾಗಿಲ್ಲ.
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಜೆ ವೇಳೆ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಈ ಭಾಗದ ರೈತರು, ಸಾರ್ವಜನಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆ ಅಕಾಲಿಕ ಮಳೆಯ ಸಿಂಚನದಿಂದಾಗಿ ಸೆಕೆಯ ಬೇಗೆಯಿಂದ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
.jpg)







