ರಂಗೇರುತ್ತಿರುವ ಮಂಡ್ಯ ರಾಜಕೀಯ: ಕ್ಷೇತ್ರದಾದ್ಯಂತ ಬಿರುಸುಗೊಂಡ ಪ್ರಚಾರ
ನಿಖಿಲ್, ಅನಿತಾ, ಸುಮಲತಾ, ಯಶ್, ದರ್ಶನ್ ರಿಂದ ಮತಯಾಚನೆ

ಮಂಡ್ಯ, ಎ.1: ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಿನೇ ದಿನೇ ಪ್ರಚಾರ ರಂಗು ಪಡೆಯುತ್ತಿದ್ದು, ಮೈತ್ರಿ ಪಕ್ಷ ಜೆಡಿಎಸ್ ಅಭ್ಯರ್ಥಿ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಬಿರುಸುಗೊಂಡಿದೆ.
ಎದುರಾಳಿಗಳ ಟೀಕೆ, ಲೇವಡಿಗಳನ್ನು ಸವಾಲಾಗಿ ಸ್ವೀಕರಿಸಿರುವ ತಾರಾ ಜೋಡಿ ದರ್ಶನ್, ಯಶ್ ಅವರು ಸುಮಲತಾ ಪರವಾಗಿ ಪ್ರಚಾರಕ್ಕೆ ಧುಮುಕುವ ಮೂಲಕ ಎದುರಾಳಿಗಳ ವಿರುದ್ಧ ರಣಕಹಳೆ ಮೊಳಗಿಸುತ್ತಿದ್ದಾರೆ. ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಹಲವೆಡೆ ರೋಡ್ ಶೋ ನಡೆಸಿ ಬಿರುಸಿನ ಪ್ರಚಾರಕ್ಕಿಳಿದ ದರ್ಶನ್ ಮಂಗಳವಾರವೂ ರೋಡ್ ಶೋ ಮುಂದುವರಿಸಿದರು. ಇವರಿಗೆ ಮತ್ತೊಬ್ಬ ನಟ ಪ್ರೇಮ್ ಸಾಥ್ ನೀಡಿದರು.
ಮಂಡ್ಯ ನಗರದ ಪೇಟೆ ಬೀದಿ, ಬೀಡಿ ಕಾರ್ಮಿಕರ ಕಾಲನಿ ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ದರ್ಶನ್ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಹೆಚ್ಚಾದ ಜನಸಂದಣಿಯಿಂದ ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಟೋಪಿ, ಶಾಲು ಹಾಕಿಕೊಂಡೆ ಪ್ರಚಾರ ನಡೆಸಿದ ದರ್ಶನ್ ಉರ್ದು ಭಾಷೆಯಲ್ಲೇ ಮತಯಾಚಿಸಿ ಗಮನ ಸೆಳೆದರು.
ಯಶ್‍ಗೆ ಆತ್ಮೀಯ ಸ್ವಾಗತ:
ಮಂಗಳವಾರ ಪ್ರಚಾರ ಕಣಕ್ಕಿಳಿದ ರಾಕಿಂಗ್ ಸ್ಟಾರ್ ಯಶ್‍ಗೆ ಹಲವು ಗ್ರಾಮಗಳಲ್ಲಿ ಆರತಿ ಬೆಳಗಿ ಆತ್ಮೀಯ ಸ್ವಾಗತ ನೀಡಲಾಯಿತು. ನೂರಾರು ಮುಖಂಡರು, ಅಭಿಮಾನಿಗಳ ಜತೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಯಶ್ ಪ್ರಚಾರ ನಡೆಸಿದರು.
ಪ್ರಚಾರ ವೇಳೆ ತನ್ನ ಅಭಿನಯದ ಕೆಜಿಎಫ್ ಚಲನಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರ ಕಿರಗಂದೂರುಗ್ರಾಮದ ಮನೆಗೆ ಭೇಟಿ ನೀಡಿದ ಯಶ್, ವಿಜಯ್ ಸಹೋದರ ಮಹದೇವು, ಕುಟುಂಬದವರ ಜೊತೆ ಸಂತಸ ಹಂಚಿಕೊಂಡರು.
ಸುಮಲತಾ ಅಂಬರೀಷ್ ಅವರು ಮದ್ದೂರು ವಿಧಾನಸಭಾ ಕ್ಷೇತ್ರದ ಉಪ್ಪಿನಕೆರೆ, ನಗರಕೆರೆ, ಅಜ್ಜಹಳ್ಳಿ, ಮಾಲಗಾರನಹಳ್ಳಿ ಸೇರಿದಂತೆ ಆ ಭಾಗದ ಗ್ರಾಮಗಳಲ್ಲಿ ಮತಯಾಚಿಸಿದರೆ, ಶ್ರೀರಂಗಪಟ್ಟಣದಲ್ಲಿ ನಡೆದ ರೈತಸಂಘ, ಬಿಜೆಪಿ, ಕಾಂಗ್ರೆಸ್ ಸ್ವಾಭಿಮಾನಿಗಳ ಸಭೆಯಲ್ಲಿ ಭಾಗವಹಿಸಿದ್ದ ಪುತ್ರ ಅಭಿಷೇಕ್ ಅಮ್ಮನ ಗೆಲುವಿಗೆ ಶ್ರಮಿಸಲು ಮನವಿ ಮಾಡಿದರು.
ಅಮ್ಮ-ಮಗನ ಪ್ರಚಾರ:
ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೈತ್ರಿ ಪಕ್ಷ ಜೆಡಿಎಸ್ ಅಭ್ಯರ್ಥಿ ತನ್ನ ಪುತ್ರ ನಿಖಿಲ್ ಪರವಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ನಾಗಮಂಗಲ ಕ್ಷೇತ್ರದಲ್ಲಿ ಹಾಗೂ ನಿಖಿಲ್ ಮಳವಳ್ಳಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ನಾಮಗಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮದ್ದೂರು ತಾಲೂಕಿನ ಮರಳಿಗ, ಗುಡಿದೊಡ್ಡಿ, ಕೊಪ್ಪ, ಕೋಣಸಾಲೆ, ಚೊಟ್ಟನಹಳ್ಳಿ, ಗೂಳೂರು, ಚಿಕ್ಕದೊಡ್ಡಿ, ಸೇರಿದಂತೆ ಇತರ ಗ್ರಾಮಗಳಲ್ಲಿ ಅನಿತಾ ಮತಯಾಚಿಸಿದರು.
ತಾತ ದೇವೇಗೌಡ, ಅಪ್ಪ ಕುಮಾರಸ್ವಾಮಿ ಅವರ ಮೇಲೆ ಮಂಡ್ಯ ಜಿಲ್ಲೆಯ ಋಣ ಬಹಳಷ್ಟಿದೆ. ಅದನ್ನು ತೀರಿಸುವ ಉದ್ದೇಶದಿಂದ ನಿಖಿಲ್ ಇಲ್ಲಿ ಸ್ಪರ್ಧಿಸಿದ್ದಾನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದಾನೆ. ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಶಾಸಕರಾದ ಕೆ.ಸುರೇಶ್‍ಗೌಡ, ಕೆ.ಟಿ. ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಜಿಪಂ ಸದಸ್ಯ ಮರಿಹೆಗಡೆ, ತಾಪಂ ಸದಸ್ಯ ಮೋಹನ್, ಮುಖಂಡರಾದ ಲಕ್ಷ್ಮಿ ಚನ್ನರಾಜು, ನೆಲ್ಲಿಗೆರೆ ಬಾಲು, ಚಿಕ್ಕೋನಹಳ್ಳಿ ತಮ್ಮಯ್ಯ, ಹರಳಕೆರೆ ಪುಟ್ಟಸ್ವಾಮಿ, ಸತೀಶ್, ಅಶೋಕ್, ಕೋಣಸಾಲೆ ಮಧು, ಅನಸೂಯ ದೇವಿ, ಸಿದ್ದರಾಜು ಇತರ ಮುಖಂಡರು ಭಾಗವಹಿಸಿದ್ದರು.
ಮಳವಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಮುಲಗೂಡು, ಮಿಕ್ಕೆರೆ, ಹಿಟ್ಟನಹಳ್ಳಿ ಕೊಪ್ಪಲ, ಯತ್ತಂಬಾಡಿ, ಹುಲ್ಲಹಳ್ಳಿ, ತಳಗವಾದಿ, ಇತರೆಡೆ ನಿಖಿಲ್ ಪ್ರಚಾರ ನಡೆಸಿದರು. ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕ ಡಾ.ಕೆ.ಅನ್ನದಾನಿ, ಇತರ ಮುಖಂಡರು ಸಾಥ್ ನೀಡಿದರು.









