ಹಸಿವಿನಿಂದ ಮಹಿಳೆ ಸಾವು: ಪೊಲೀಸರ ಪ್ರತಿಕ್ರಿಯೆ ಕೋರಿದ ಕೇರಳ ಮಹಿಳಾ ಆಯೋಗ

ತಿರುವನಂತಪುರ, ಎ. 2: ಇಪ್ಪತ್ತೇಳು ವರ್ಷದ ಮಹಿಳೆ ಪತಿ ಮನೆಯಲ್ಲಿ ಹಸಿವಿನಿಂದ ಮೃತಪಟ್ಟ ಪ್ರಕರಣ ಕುರಿತು ಕೇರಳ ಮಹಿಳಾ ಆಯೋಗ ಮಂಗಳವಾರ ರಾಜ್ಯ ಪೊಲೀಸರಿಂದ ಪ್ರತಿಕ್ರಿಯೆ ಕೋರಿದೆ.
ಕರುನಗಪಳ್ಳಿಯ ನಿವಾಸಿಯಾಗಿದ್ದ ತುಷಾರ ಮಾರ್ಚ್ 21ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಾವನ್ನಪ್ಪಿದ ಸಂದರ್ಭ ಅವರ ತೂಕ ಕೇವಲ 20 ಕೆ.ಜಿ. ಇತ್ತು. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಭಾರತೀಯ ದಂಡ ಸಂಹಿತೆ 304ಬಿ ಸೆಕ್ಷನ್ ಅಡಿಯಲ್ಲಿ ವರದಕ್ಷಿಣೆ ಕೊಲೆ ಪ್ರಕರಣ ದಾಖಲಿಸಿದ್ದರು.
ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಅವರ ಕುಟುಂಬದ ಹೇಳಿಕೆ ಆಧಾರದಲ್ಲಿ ಮಾರ್ಚ್ 29ರಂದು ರಾಜ್ಯ ಪೊಲೀಸರು ಪತಿ ಚಂದು ಲಾಲ್ ಹಾಗೂ ಅತ್ತೆ ಗೀತಾ ಲಾಲ್ ಅವರನ್ನು ಬಂಧಿಸಲಾಗಿದೆ. ನ್ಯಾಯಾಲಯ ಅವರಿಗೆ 14 ದಿನಗಳ ಕಸ್ಟಡಿ ನೀಡಿದೆ. ಅವರ ಇಬ್ಬರು ಮಕ್ಕಳನ್ನು ಮಕ್ಕಳ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿದೆ.
‘‘ನಾವು ಮಾಟದಂತಹ ಆಯಾಮದ ಕುರಿತು ಕೂಡ ತನಿಖೆ ನಡೆಸುತ್ತಿದ್ದೇವೆ. ಅತ್ತೆ ಅವರು ತುಷಾರಾ ಅವರ ಮೇಲೆ ಮಾಟ ಮಾಡುತ್ತಿದ್ದರು ಎಂದು ಸಂಬಂಧಿಕರು ಹಾಗೂ ನೆರೆಹೊರೆಯವರು ಆರೋಪಿಸುತ್ತಿದ್ದಾರೆ’’ ಎಂದು ಪೊಲೀಸರು ತಿಳಿಸಿದ್ದಾರೆ.





