ಜನ ಸಾಮಾನ್ಯರ ಸಮಸ್ಯೆಗಳ ಮರೆತು ಮತಭಿಕ್ಷೆಗೆ ನಿಂತ ಮುಖಂಡರು
ವೈಯಕ್ತಿಕ ವಿಚಾರಗಳಿಗೆ ಸೀಮಿತಗೊಂಡ ಚುನಾವಣಾ ಅಖಾಡ

ಬೆಂಗಳೂರು, ಎ. 2: ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಭೀಕರ ಸ್ವರೂಪದ ಬರ, ಕುಡಿಯುವ ನೀರಿನ ಸಮಸ್ಯೆ, ಬಡತನ, ಬೆಲೆ ಏರಿಕೆ, ರೈತರ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಆದರೆ, ಸಾಮಾನ್ಯ ಜನರ ಸಮಸ್ಯೆಗಳು ಲೋಕತಂತ್ರದ ರಣಕಣದಲ್ಲಿ ಗೌಣಗೊಳ್ಳುತ್ತಿವೆ.
ರಾಜ್ಯದ ಮೂವತ್ತು ಜಿಲ್ಲೆಗಳ 176 ತಾಲೂಕುಗಳ ಪೈಕಿ 150ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಆವರಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಭೀಕರ ಸ್ವರೂಪದಲ್ಲಿದೆ. ಹೀಗಾಗಿ ಸರಕಾರ ನೂರಾರು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲಬುರಗಿ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ಆರೇಳು ಜಿಲ್ಲೆಗಳ ಪ್ರಮುಖ ನಗರಗಳಲ್ಲೆ ಏಳೆಂಟು ದಿನಗಳಿಗೆ ಒಮ್ಮೆ ನೀರು ಬರುತ್ತಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಜನರು ಹಗಲು-ರಾತ್ರಿಗಳ ಪರಿವೆ ಮರೆತು ‘ಬಣ್ಣವಿಲ್ಲದ ಬಂಗಾರ’ ನೀರಿಗಾಗಿ ನಿತ್ಯ ಜಾಗರಣೆ ಮಾಡುವುದು ಅನಿವಾರ್ಯವಾಗಿದೆ.
ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ರೈತರ ಆತ್ಮಹತ್ಯೆ, ಕಬ್ಬಿನ ಬಾಕಿ, ಬಡತನ, ನಿರುದ್ಯೋಗದ ಜತೆಗೆ ಸ್ಥಳೀಯ ಸಮಸ್ಯೆಗಳ ಪಟ್ಟಿಯೂ ದೊಡ್ಡದಿದೆ. ಆದರೆ, ಯಾವುದೇ ಸಮಸ್ಯೆಗೂ ಲೋಕಸಭೆ ಚುನಾವಣೆಯಲ್ಲಿ ಚರ್ಚೆಯ ವಿಷಯವೇ ಆಗಿಲ್ಲ ಎಂಬುದು ನಿಜಕ್ಕೂ ಅಚ್ಚರಿಯೋ ಅಥವಾ ರಾಜಕೀಯ ಪಕ್ಷಗಳ ಜಾಣ ಮೌನವೋ ತಿಳಿಯದು.
ಚೌಕಿದಾರ್-ಚೋರ್‌ಗೆ ಸೀಮಿತ: ‘2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಯಾವುದೇ ಆಶ್ವಾಸನೆಯನ್ನು ಈಡೇರಿಸಿಲ್ಲ. ಬಿಜೆಪಿ ವೈಫಲ್ಯಗಳನ್ನು ಎತ್ತಿಹಿಡಿಯಬೇಕಿತ್ತು. ಆದರೆ, ಬಿಜೆಪಿ ‘ಚೌಕಿದಾರ್’ ಎಂದರೆ, ಕಾಂಗ್ರೆಸ್ ‘ಚೋರ್’ ಎನ್ನುತ್ತಿದೆ. ಆದರೆ, ಜನ ಸಾಮಾನ್ಯರ ಮೂಲಭೂತ ಸಮಸ್ಯೆಗಳಾದ ಬಡತನ, ನಿರುದ್ಯೋಗ, ರೈತರ ಸಮಸ್ಯೆಗಳು, ಬರ, ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಸೇರಿದಂತೆ ಬೆಲೆ ಏರಿಕೆ, ರೂಪಾಯಿ ವೌಲ್ಯ ಕುಸಿತ, ನೋಟು ರದ್ದತಿ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈ ಚುನಾವಣೆಯಲ್ಲಿ ಜನರ ಸಮಸ್ಯೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ.
ಜನ ಸಾಮಾನ್ಯರ ಸಮಸ್ಯೆಗಳೇ ಚುನಾವಣೆ ವಿಚಾರಗಳಾಗಬೇಕು. ಆದರೆ, ಈ ವಿಚಾರದ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಮಾತನಾಡುತ್ತಿಲ್ಲ. ಆದರೆ ಜನರ ಸಮಸ್ಯೆಗಳೇ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಬೇಕು ಎಂದು ಪ್ರಾಂತ ರೈತ ಸಂಘದ ಮುಖಂಡ ಮಾರುತಿ ಮಾನ್ಪಡೆ ಒತ್ತಾಯಿಸಿದ್ದಾರೆ.







