ಚುನಾವಣೆಗೆ ಮುನ್ನ ಜನಧನ್ ಖಾತೆಗಳಲ್ಲಿ ಶಂಕಾಸ್ಪದ ರೀತಿಯಲ್ಲಿ 1.7 ಕೋ.ರೂ. ಜಮೆ!

ಹೊಸದಿಲ್ಲಿ,ಎ.2: ಚುನಾವಣೆಗಳಿಗೆ ಮುನ್ನ ಶಂಕಾಸ್ಪದ ಠೇವಣಿಗಳನ್ನು ಸ್ವೀಕರಿಸಿದ್ದಕ್ಕಾಗಿ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಬ್ಯಾಂಕ್ ಶಾಖೆಯೊಂದರಲ್ಲಿನ 1,700 ಜನಧನ ಖಾತೆಗಳ ಮೇಲೆ ಚುನಾವಣಾ ಆಯೋಗದಿಂದ ನಿಯೋಜಿತ ಕಣ್ಗಾವಲು ತಂಡಗಳು ನಿಗಾಯಿರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಈ ಖಾತೆಗಳಲ್ಲಿ ತಲಾ ಸುಮಾರು 10,000 ರೂ.ಗಳಂತೆ ಒಟ್ಟು 1.7 ಕೋ.ರೂ.ಗಳು ಜಮೆಯಾಗಿವೆ ಮತ್ತು ಮತದಾರರಿಗೆ ಲಂಚ ನೀಡಲು ಚುನಾವಣಾ ಅಭ್ಯರ್ಥಿಗಳು ಈ ಖಾತೆಗಳನ್ನು ದುರುಪಯೋಗ ಪಡಿಸಿಕೊಂಡಿರುವ ಸಾಧ್ಯತೆಯಿರುವುದರಿಂದ ತನಿಖಾ ಮತ್ತು ಗುಪ್ತಚರ ತಂಡಗಳು ಇವುಗಳ ಮೇಲೆ ನಿಗಾಯಿರಿಸಿವೆ ಎಂದರು.
ಆದಾಯ ತೆರಿಗೆ ಇಲಾಖೆಯು ಚುನಾವಣೆಯಲ್ಲಿ ಕಪ್ಪುಹಣದ ಬಳಕೆಯನ್ನು ಮತ್ತು ಮತದಾರರಿಗೆ ಆಮಿಷವೊಡ್ಡುವುದನ್ನು ತಡೆಯಲು ನಿಯೋಜಿಸಲಾಗಿರುವ ಇತರ ಏಜೆನ್ಸಿಗಳ ಸಹಯೋಗದೊಂದಿಗೆ ಈ ವಿಷಯದಲ್ಲಿ ತನಿಖೆಯನ್ನು ಆರಂಭಿಸಿದೆ.
ಚುನಾವಣಾ ಆಯೋಗವು ಈ ಏಜೆನ್ಸಿಗಳಿಂದ ವರದಿಯನ್ನು ಕೇಳಿದ್ದು,ಮೊರಾದಾಬಾದ್ ಜಿಲ್ಲೆಯ ಸಂಬಂಧಿತ ಬ್ಯಾಂಕಿನಿಂದ ಈ ಬಗ್ಗೆ ವಿವರಗಳನ್ನು ಕೋರಲಾಗಿದೆ ಮತ್ತು ಹಣವನ್ನು ಬ್ಯಾಂಕಿಂಗ್ ಪ್ರತಿನಿಧಿಗಳು ಜಮಾ ಮಾಡಿದ್ದಾರೆ ಎನ್ನುವುದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ ಎಂದು ಅವು ಆಯೋಗಕ್ಕೆ ತಿಳಿಸಿವೆ ಎಂದು ಅಧಿಕಾರಿಗಳು ತಿಳಿಸಿದರು. ಈ ಹಣವು ಸರಕಾರದ ಯಾವುದಾದರೂ ಯೋಜನೆಗೆ ಸಂಬಂಧಿಸಿದ್ದೇ ಎನ್ನುವುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿಯೂ ತನಿಖೆ ನಡೆಯಲಿದೆ ಎಂದರು.







