ಯಾವುದೇ ಪಕ್ಷದ ಪರ ಪ್ರಚಾರ ಮಾಡಲ್ಲ: ಯದುವೀರ್ ಒಡೆಯರ್ ಸ್ಪಷ್ಟನೆ

ಮೈಸೂರು,ಏ.2: ಚುನಾವಣೆಯಲ್ಲಿ ಯಾವ ಪಕ್ಷದವರ ಜೊತೆಯೂ ಪ್ರಚಾರಕ್ಕೆ ಹೋಗುವುದಿಲ್ಲವೆಂದು ರಾಜವಂಶಸ್ಥ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಪಕ್ಷದವರ ಜೊತೆ ಪ್ರಚಾರಕ್ಕೆ ಹೋಗುವುದಿಲ್ಲ. ಅರಮನೆಗೆ ಬರುವವರಿಗೆ ಸ್ವಾಗತವಿದೆ. ಯಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೋ ಅವರಿಗೆ ಅರಮನೆಯಿಂದ ಬೆಂಬಲವಿರಲಿದೆ ಎಂದರು.
ರಿಯಲ್ ಸ್ಟಾರ್ ಉಪೇಂದ್ರ ಭೇಟಿಯ ಕುರಿತು ಮಾತನಾಡಿದ ಅವರು, ಅದೊಂದು ಸೌಜನ್ಯದ ಭೇಟಿಯಷ್ಟೇ. ಅವರು ಪ್ರಜಾಕೀಯ ಅಂತ ಹೊಸ ಪಕ್ಷ ಮಾಡಿದ್ದಾರೆ. ಅದರ ಕುರಿತು ಮಾಹಿತಿ ನೀಡಲು ಬಂದಿದ್ದರು. ಅವರ ಪರಿಚಯ ಒಂದು ವರ್ಷದಿಂದಲೂ ಇದೆ. ಪಕ್ಷದಲ್ಲಿ ಹೊಸ ಕಾನ್ಸೆಪ್ಟ್ ಇದೆ ಆ ಕುರಿತು ಮಾಹಿತಿ ನೀಡಲು ಬಂದಿದ್ದರು ಎಂದರು.
ನಟ ಅಂಬರೀಶ್ ನಿಮ್ಮ ಕುಟುಂಬಕ್ಕೆ ಹಳೆಯ ಪರಿಚಯ. ಅಂಬರೀಶ್ ಅವರ ಪತ್ನಿ ಚುನಾವಣೆಗೆ ನಿಂತಿದ್ದಾರೆ. ನಿಮ್ಮ ಬೆಂಬಲವಿದೆಯೇ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ತುಂಬಾ ವರ್ಷದಿಂದಲೂ ಪರಿಚಯ. ಯಾರಿಗೆ ಮತ ಹಾಕಬೇಕೆಂಬುದನ್ನು ಮಂಡ್ಯದ ಜನತೆ ತೀರ್ಮಾನ ಮಾಡುತ್ತಾರೆ. ಅಭಿವೃದ್ಧಿ ಕೆಲಸ ಮಾಡಿದವರಿಗೆ ಅರಮನೆಯಿಂದ ಯಾವತ್ತೂ ಬೆಂಬಲವಿದೆ ಎಂದು ತಿಳಿಸಿದರು.





