ಕೇಂದ್ರದಲ್ಲಿ ಸ್ಥಿರ ಸರಕಾರ ರಚನೆಗೆ ಮೋದಿ ಕೈ ಬಲಪಡಿಸಿ: ಶೋಭಾ ಕರಂದ್ಲಾಜೆ

ತರೀಕೆರೆ, ಎ.3: ರಾಷ್ಟ್ರದಲ್ಲಿ ಶಾಂತಿ ನೆಲೆಸಿ, ಭಾರತ ವಿಶ್ವದ ಮುಂಚೂಣಿಗೆ ಬರಲು ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನಿಯಾಗಿ ಆಯ್ಕೆಯಾಗಬೇಕೆಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಶೋಭಾ ಕರಂದ್ಲಾಜೆ ಹೇಳಿದರು.
ತರೀಕೆರೆಯ ತಾಲೂಕಿನ ದೋರನಾಳು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಇಡೀ ಭಾರತದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ದೇಶದ ಜನತೆ ಬೆಂಬಲಿಸಿದ್ದರಿಂದ ನರೇಂದ್ರ ಮೋದಿಯವರು ಭಾರತದ ಪ್ರಧಾನ ಮಂತ್ರಿಯಾದರು. ಹೀಗಾಗಿ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧ ವೃದ್ದಿಸಿ ವಿಶ್ವದ 4 ನೇ ಅಗ್ರಮಾನ್ಯ ನಾಯಕರಾಗಿ ಹೊರಹೊಮ್ಮಿದರು. ವಿದೇಶದಲ್ಲಿಯೂ ಅವರ ಸ್ನೇಹಪರತೆಯಿಂದ ಇಡೀ ಜಗತ್ತೇ ಭಾರತದ ಕಡೆ ನೋಡುವಂತಾಗಿದೆ ಎಂದರು.
ಪ್ರಧಾನಿ ಮೋದಿ ಅವರು, ರಾಷ್ಟ್ರದ ಯುವ ಜನಾಂಗ ಸ್ವಾವಲಂಭಿಗಳಾಗಿ ಬದುಕಲು ಹಲವಾರು ಯೋಜನೆ ತಂದು ಯುವ ಸಮುದಾಯಕ್ಕೆ ಆಶಾಕಿರಣವಾಗಿದ್ದಾರೆ. ನಾನು ಸಂಸದೆಯಾದ ನಂತರ ನನ್ನ ಅವಧಿಯಲ್ಲಿ ತರೀಕೆರೆ ಕ್ಷೇತ್ರಕ್ಕೆ ಕೇಂದ್ರದಿಂದ ಅನುದಾನ ತಂದು ಹಲವಾರು ಕಾಮಗಾರಿಗಳನ್ನು ನಿರ್ವಹಿಸಿದ್ದೇನೆ. ಈ ಬಾರಿ ಲೋಕಸಭೆಗೆ ಸ್ಪರ್ಧಿಸಿರುವ ನನಗೆ ಕಳೆದ ಬಾರಿ ನೀಡಿದ ಬೆಂಬಲದಂತೆ ಈ ಬಾರಿಯೂ ಅಧಿಕ ಮತ ನೀಡಿ ಕೇಂದ್ರದಲ್ಲಿ ಬಿಜೆಪಿ ಸರಕಾರ ರಚನೆಗೆ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.
ಶಾಸಕ ಡಿ.ಎಸ್ ಸುರೇಶ್ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿಯವರು ರೈತರಿಗಾಗಿ ಹಲವಾರು ಯೋಜನೆ ತಂದು ದೇಶದಲ್ಲಿ ಒಟ್ಟು 12 ಕೋಟಿ ರೈತರು ಇದರ ಪ್ರಯೋಜನ ಪಡೆದುಕೊಂಡಿರುತ್ತಾರೆ. ಅದೇ ರೀತಿ ರಾಜ್ಯ ಸರಕಾರ ಕೇಂದ್ರಕ್ಕೆ ರೈತರ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ. ರಾಜ್ಯ ಸರಕಾರ ವೈಫಲ್ಯದಿಂದ ರಾಜ್ಯ ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೈತ್ರಿ ಸರಕಾರ ಅನ್ಯಾಯ ಮಾಡಿದೆ. ಎಂಪಿ ಚುನಾವಣೆಯ ನಂತರ ಮೈತ್ರಿ ಸರಕಾರ ಪತನಗೊಂಡು ಯಡಿಯೂರಪ್ಪ ಈ ರಾಜ್ಯದ ಮುಖ್ಯ ಮಂತ್ರಿಯಾಗಿ ರೈತರ ಬದುಕು ಹಸನುಗೊಳಿಸಲಿದ್ದಾರೆ. ಕಾರ್ಯಕರ್ತರು ಈ ಚುನಾವಣೆಯನ್ನು ಪ್ರತಿಷ್ಠೆಯ ವಿಷಯವನ್ನಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಬಿ ಆನಂದಪ್ಪ, ಕೆ.ಆರ್ ಆನಂದಪ್ಪ, ಜಿಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಚೈತ್ರಶ್ರೀ, ಕೆ.ಎಚ್.ಮಹೇಂದ್ರ, ಪದ್ಮಾವತಿ, ಮಂಜುಳಾ ಹೇಮಂತ್, ಹೇಮಾವತಿ ಪುಟ್ಟನಾಯ್ಕ, ರಾಜೇಶ್ವರಿ, ಹಾಗೂ ಇತರರು ಭಾಗವಹಿಸಿದ್ದರು.







