ಕಾಂಗ್ರೆಸ್ ಕಾರ್ಯಕರ್ತರ ಅಶಿಸ್ತು ಸಹಿಸಲ್ಲ: ದಿನೇಶ್ ಗುಂಡೂರಾವ್
ಮಂಡ್ಯ ಪಕ್ಷೇತರ ಅಭ್ಯರ್ಥಿ ಪರ ಪಕ್ಷದ ಬಾವುಟ ಪ್ರದರ್ಶನ ಹಿನ್ನೆಲೆ

ಬೆಂಗಳೂರು, ಎ.3: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ನಡೆಸುವಾಗ ಕಾಂಗ್ರೆಸ್ ಪಕ್ಷದ ಬಾವುಟಗಳನ್ನು ಕೆಲವರು ಪ್ರದರ್ಶಿಸುತ್ತಿರುವುದು ಕಂಡು ಬಂದಿದೆ. ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಅಶಿಸ್ತು ಸಹಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಅಭ್ಯರ್ಥಿ ಪ್ರಚಾರ ವೇಳೆ ನಮ್ಮ ಪಕ್ಷದ ಭಾವುಟ, ಚಿಹ್ನೆಯನ್ನು ಬಳಸದಂತೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು.
ಕಾಂಗ್ರೆಸ್ ಭಾವುಟದ ಜೊತೆ ಬಿಜೆಪಿ ಭಾವುಟ ಹಾರಿಸಿದರೆ ನಾವು ಒಂದಾಗಲು ಸಾಧ್ಯವಿಲ್ಲ. ಪಕ್ಷೇತರ ಅಭ್ಯರ್ಥಿ ಪರವಾಗಿ ನಮ್ಮ ಭಾವುಟ ಹಿಡಿದುಕೊಂಡು ಪ್ರಚಾರಕ್ಕೆ ಹೋಗುವ ಬದಲು, ಪಕ್ಷ ಬಿಟ್ಟು ಹೋಗಿ, ಯಾರಿಗಾದರೂ ಕೆಲಸ ಮಾಡಲಿ. ನಾವು ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಮಂಡ್ಯ ಜಿಲ್ಲೆಯ ಎಲ್ಲ ಪ್ರಮುಖ ಕಾಂಗ್ರೆಸ್ ಮುಖಂಡರ ಜೊತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನಾನು ನಿನ್ನೆ ರಾತ್ರಿ ಸಭೆ ನಡೆಸಿದ್ದೇವೆ. ಚುನಾವಣೆಯನ್ನು ಯಾವ ರೀತಿ ನಿಭಾಯಿಸಬೇಕು ಎಂಬುದರ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ಎಲ್ಲ ಕಡೆ ಸಿದ್ದರಾಮಯ್ಯ ಪ್ರವಾಸ ಕೈಗೊಳ್ಳುತ್ತಾರೆ. ಅವರು ಹೋದಾಗ ಎಲ್ಲ ಮುಖಂಡರು ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿದ್ದಾರೆ. ಮೈಸೂರಿನಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದವು, ಅದನ್ನು ಸರಿಪಡಿಸಿದ್ದೇವೆ. ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ದೇವೇಗೌಡರು ಹಾಗೂ ಸಿದ್ದರಾಮಯ್ಯ ನಡೆಸುವ ಜಂಟಿ ಪ್ರಚಾರದ ವೇಳೆ ಎಲ್ಲ ಮುಖಂಡರು ಹಾಜರಿರಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟ ಸೂಚನೆ ನೀಡಿದ್ದಾರೆ. ಅದರಂತೆ, ಕಾಂಗ್ರೆಸ್ ನಾಯಕರು ಕೆಲಸ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.







