"ಓಟು ಕೇಳಲು ಬರುತ್ತೀರಲ್ಲ, ನಿಮಗೆ ನಾಚಿಕೆ ಆಗಲ್ವಾ"
ಪ್ರಚಾರದ ವೇಳೆ ಗ್ರಾಮಸ್ಥರಿಂದ ಶೋಭಾ ಕರಂದ್ಲಾಜೆಗೆ ತರಾಟೆ

ಚಿಕ್ಕಮಗಳೂರು, ಎ.3: "ಚುನಾವಣೆ ಬಂದರೆ ಗ್ರಾಮಕ್ಕೆ ಬರುತ್ತೀರ. ಇಷ್ಟು ದಿನ ಎಲ್ಲಿ ಹೋಗಿದ್ದಿರಿ ? ಗ್ರಾಮದಲ್ಲಿ ಕುಡಿಯುವ ನೀರಿಲ್ಲ. ಬರಗಾಲದಿಂದ ಜನರು ಬದುಕುವುದು ಕಷ್ಟವಾಗಿದೆ. ಜನರು ಗುಳೆ ಹೋಗುತ್ತಿದ್ದಾರೆ. ನೀವೇನು ಕೆಲಸ ಮಾಡಿದ್ದೀರ ಎಂದು ಎಸ್.ಬಿದರೆ ಮತ್ತು ಹಿರೇಗೌಡ ಗ್ರಾಮಸ್ಥರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ, ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಬುಧವಾರ ಶೋಭಾ ಕರಂದ್ಲಾಜೆ ಅವರು ಎಸ್.ಬಿದರೆ ಮತ್ತು ಹಿರೇಗೌಡ ಗ್ರಾಮಕ್ಕೆ ಮತಯಾಚನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಗ್ರಾಮದಲ್ಲಿ ಕುಡಿಯುವ ನೀರಿಲ್ಲ, ಚರಂಡಿಯಿಲ್ಲ. ಬರಗಾಲದಿಂದ ಜನರು ಊರು ಬಿಡುತ್ತಿದ್ದಾರೆ. ಸಮಸ್ಯೆ ಕೇಳಲು ಬಾರದವರು, ಓಟು ಕೇಳಲು ಬರುತ್ತೀರಲ್ಲ. ನಿಮಗೆ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದರು.
ಈ ವೇಳೆ ಶೋಭಾ ಕರಂದ್ಲಾಜೆ ಮಾತನಾಡಿ, ಗ್ರಾಮದಲ್ಲಿ ಶಾಸಕ ಸಿ.ಟಿ.ರವಿ, ಜಿಲ್ಲಾ ಪಂಚಾಯತ್ ಸದಸ್ಯರು ಕೆಲಸ ಮಾಡಿಕೊಟ್ಟಿದ್ದಾರೆ. ಕಳೆದ ಐದು ವರ್ಷ ಸಿದ್ದರಾಮಯ್ಯ ಅವರ ಸರಕಾರ ಇತ್ತು. ಈಗ 10-11 ತಿಂಗಳಿಂದ ಕುಮಾರಸ್ವಾಮಿ ಅವರ ಸರಕಾರ ಇದೆ. ಅವರನ್ನು ಕೇಳಿ. ನಮ್ಮನ್ನು ಯಾಕೆ ಕೇಳುತ್ತೀರ ? ರಾಜ್ಯ ಸರಕಾರ ಮಾಡಬೇಕಾದ ಕೆಲಸವನ್ನು ನಮ್ಮ ತಲೆಮೇಲೆ ಯಾಕೆ ಹಾಕುತ್ತೀರ? ನಾವು ಎಷ್ಟು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವೋ ಅಷ್ಟು ಕೆಲಸ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದರು.
ಇಂದು ಮೋದಿ ಸರಕಾರ ಬೇಕಾಗಿರುವುದು ಚರಂಡಿ ಆಗಿಲ್ಲ ಎಂದಲ್ಲ, ದೇಶದ ರಕ್ಷಣೆಗಾಗಿ, ಸೈನಿಕರನ್ನು ಬಲಗೊಳಿಸಲು, ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲು ಮೋದಿ ಸರಕಾರ ಬೇಕು. ಕೇಂದ್ರ ಸರಕಾರ ಉಜ್ವಲ ಗ್ಯಾಸ್ ಸಂಪರ್ಕ ನೀಡಿದೆ. ಸ್ವಚ್ಛ ಭಾರತ ಅಭಿಯಾನದಲ್ಲಿ ಶೌಚಾಲಯ ನೀಡಿದ್ದು ಯಾರು? ರಸ್ತೆ ನೀಡಿದವರು ಯಾರು? ಎಂದು ನೆರೆದಿದ್ದ ಜನತೆಯನ್ನು ಪ್ರಶ್ನಿಸಿದ ಅವರು, ರಾಜಕೀಯ ಮಾಡುವವರು ಬಿಜೆಪಿ ಮುಂದೆ ರಾಜಕೀಯ ಮಾಡುವುದಲ್ಲ. ರಾಜ್ಯದಲ್ಲಿ ಯಾವ ಸರಕಾರ ಇದೆಯೋ, ಅದರ ಮುಂದೆ ಬಂದು ರಾಜಕೀಯ ಮಾಡಬೇಕೆಂದು ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಚಿಹ್ನೆಯಿಂದ ಪ್ರಶ್ನೆ ಕೇಳುವ ನಿಮ್ಮ ಹಣೆಬರಹಕ್ಕೆ ಈ ಬಾರಿ ಕಾಂಗ್ರೆಸ್ ಚಿಹ್ನೆಯೇ ಇಲ್ಲ, ಜೆಡಿಎಸ್‍ಗೆ ಬಿಟ್ಟು ಕೊಟ್ಟಿದ್ದಾರೆ. ಇಂದಿರಾಗಾಂಧಿ ಗೆದ್ದ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಚಿಹ್ನೆಯಿಲ್ಲದಂತಾಗಿದೆ. ಯಾರಿಗಾಗಿ ಕೆಲಸ ಮಾಡುತ್ತಿದ್ದೀರಾ ಎಂದು ಕಾಂಗ್ರೆಸ್ ಮುಖಂಡರನ್ನು ಕೇಳಿ ಎಂದು ಹೇಳಿದರು.







