‘ನ್ಯಾಯ್’ಗೆ ಅನಿಲ್ ಅಂಬಾನಿಯಂತಹ ‘ಕಳ್ಳ’ ಉದ್ಯಮಿಗಳ ಕಿಸೆಯಿಂದ ನಿಧಿ ಬರಲಿದೆ: ರಾಹುಲ್ ಗಾಂಧಿ

ಬೊಕಾಖಾತ್ (ಅಸ್ಸಾಂ), ಎ. 3: ಮಹಂತ್ವಾಕಾಂಕ್ಷೆಯ ‘ನ್ಯಾಯ್’ ಯೋಜನೆಗೆ ನಿಧಿ ‘ಕಳ್ಳ’ ಉದ್ಯಮಿಗಳ ಕಿಸೆಯಿಂದ ಬರಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಬೊಕಾಖತ್‌ನ ಮೇಲ್ ಅಸ್ಸಾಂ ಪಟ್ಟಣದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ‘ನ್ಯಾಯ್’ ಯೋಜನೆ ಅಡಿಯಲ್ಲಿ ಭಾರತದ ಶೇ. 20 ಕಡು ಬಡ ಕುಟುಂಬಗಳಿಗೆ ವಾರ್ಷಿಕವಾಗಿ 72,000 ರೂಪಾಯಿಯ ನೀಡಲಾಗುವುದು ಎಂದರು. ಮೋದಿ ಅವರು ಜನರ ಖಾತೆಗಳಿಗೆ ಹಣ ಠೇವಣಿ ಮಾಡುವ ಭರವಸೆ ನೀಡಿದ್ದರು. ಆದರೆ, ಅವರು ಇದನ್ನು ಅಂಬಾನಿ ಅವರಂತಹ ಕೆಲವು ಶ್ರೀಮಂತ ಉದ್ಯಮಿಗಳಿಗೆ ಮಾತ್ರ ಮಾಡಿದರು ಎಂದು ಅವರು ಹೇಳಿದರು.
‘‘ನ್ಯಾಯ್ ಯೋಜನೆಗೆ ನಿಧಿ ಕಳೆದ ನಾಲ್ಕು ವರ್ಷಗಳಲ್ಲಿ ಚೌಕಿದಾರ್ ನರೇಂದ್ರ ಮೋದಿ ಹಣ ನೀಡಿದ ಅನಿಲ್ ಅಂಬಾನಿ ಅವರಂತಹ ಕಳ್ಳರ ಕಿಸೆಯಿಂದ ಬರಲಿದೆ. ನಾವು ಜಾತಿ, ವರ್ಗ ಅಥವಾ ಧರ್ಮ ಪರಿಗಣಿಸದೆ ಬಡವರ ಮುಖ್ಯವಾಗಿ ಮಹಿಳೆಯರ ಖಾತೆಗೆ ಠೇವಣಿ ಮಾಡಲಿದ್ದೇವೆ’’ ಎಂದು ಅವರು ಹೇಳಿದರು. ತೀವ್ರ ನಿರುದ್ಯೋಗ ಪರಿಸ್ಥಿತಿಗೆ ದೇಶ ಸಾಕ್ಷಿಯಾಗುತ್ತಿದೆ ಎಂದು ಹೇಳಿದ ಅವರು, ಸ್ವಂತ ಉದ್ಯಮ ಆರಂಭಿಸಲು ಬಯಸುವ ಯುವಕರಿಗೆ ಸೌಲಭ್ಯಗಳನ್ನು ಕಾಂಗ್ರೆಸ್ ಪಕ್ಷ ನೀಡಲಿದೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಸಲಾಗುವುದು ಎಂದು ಅವರು ಹೇಳಿದರು.
ಈಶಾನ್ಯ ರಾಜ್ಯಗಳಿಗೆ ವಿಶೇಷ ರಾಜ್ಯದ ಸ್ಥಾನಮಾನ ನೀಡಲಾಗುವುದು ಹಾಗೂ ಈ ರಾಜ್ಯಗಳನ್ನು ಉತ್ಪಾದನೆಯ ಕೇಂದ್ರವನ್ನಾಗಿ ಮಾಡಲು ಕೈಗಾರಿಕಾ ನೀತಿ ಜಾರಿಗೆ ತರಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.







