ಸಂಸದ ಶಿವರಾಮೇಗೌಡ ವಿರುದ್ಧ ದೂರು

ಮಂಡ್ಯ, ಎ.3: ಲೋಕಸಭೆ ಅಭ್ಯರ್ಥಿ ಅಂಬರೀಷ್ ಸುಮಲತಾ ಅವರ ಜಾತಿ ಬಗ್ಗೆ ಪ್ರಸ್ತಾಪಿಸಿರುವ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ.ಕಬ್ಬಾಳಯ್ಯ ದೂರು ನೀಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ನಾಮಂಗಲದಲ್ಲಿ ನಡೆದ ಸಭೆಯಲ್ಲಿ ಶಿವರಾಮೇಗೌಡರು ಸುಮಲತಾ ಗೌಡ ಜಾತಿಯವರಲ್ಲ, ನಾಯ್ಡು ಜಾತಿಯವರು. ಚಿತ್ರನಟ ದರ್ಶನ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಹ ನಾಯ್ಡು ಜಾತಿಯವರು, ಇವರಾರು ಒಕ್ಕಲಿಗರಲ್ಲ. ಜಿಲ್ಲೆಯನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ ಎಂಬುದಾಗಿ ಅವಮಾನ ಮಾಡಿದ್ದಾರೆ. ಇದು ಕೋಮು ದ್ವೇಷ ಹರಡುವ ಹಾಗೂ ಜಾತಿ ಸಂಘರ್ಷ ಉಂಟು ಮಾಡುವ ಹೇಳಿಕೆಯಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಸಂವಿಧಾನಬದ್ಧವಾಗಿ ಯಾವುದೇ ಜಾತಿ, ಮತಗಳ ನಡುವೆ ತಾರತಮ್ಯ ಮಾಡದೇ ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ಸಂಸದರೇ ಈ ರೀತಿ ಸಮಾಜದಲ್ಲಿ ಜಾತಿ ಹೆಸರಿನಲ್ಲಿ ಅವಹೇಳನಕಾರಿಯಾಗಿ ಒಬ್ಬ ಮಹಿಳೆಯನ್ನು ಅವಮಾನಿಸುತ್ತಿದ್ದಾರೆ. ಜಾತಿ ಹೇಳಿಕೆಯಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವುಂಟು ಮಾಡುತ್ತಿರುವ ಶಿವರಾಮೇಗೌಡ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಅವಕಾಶ ನೀಡುವಂತೆ ಅವರು ಒತ್ತಾಯಿಸಿದ್ದಾರೆ.





