ಕೇಂದ್ರ ಸರಕಾರದ ಉದ್ಯೋಗಗಳಲ್ಲಿಯೂ ಮಹಿಳೆಯರಿಗೆ ಮೀಸಲಾತಿ: ದಿನೇಶ್ ಗುಂಡೂರಾವ್

ಬೆಂಗಳೂರು, ಎ.3: ಮಹಿಳಾ ಮೀಸಲಾತಿ ಕಾನೂನನ್ನು ಐದು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರ ಜಾರಿ ಮಾಡಿಲ್ಲ. ಆದರೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಅಧಿವೇಶನದಲ್ಲೇ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಜೊತೆಗೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿಯೂ ಶೇ.33ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಿರುವ ಇಂತಹ ಪ್ರಣಾಳಿಕೆಯನ್ನು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾರು ಬಿಡುಗಡೆ ಮಾಡಿರಲಿಲ್ಲ ಎಂದರು.
ದೇಶದ ಎಲ್ಲ ರಾಜ್ಯಗಳಿಗೆ ಪ್ರವಾಸ ಮಾಡಿ, ಅಲ್ಲಿನ ವಿಚಾರಗಳು, ಬುದ್ಧಿಜೀವಿಗಳು, ಎನ್‌ಜಿಓಗಳು, ರೈತರು, ಸಾಮಾನ್ಯ ಜನರು, ಯುವಕರು ಹಾಗೂ ಎಲ್ಲ ವರ್ಗದ ಜನರೊಂದಿಗೆ ಸಮಾಲೋಚನೆ ಮಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾಯಕಲ್ಪ ನೀಡುವ ಪ್ರಣಾಳಿಕೆಯನ್ನು ಕಾಂಗ್ರೆಸ್ ದೇಶಕ್ಕೆ ಸಮರ್ಪಣೆ ಮಾಡಿದೆ ಎಂದು ಅವರು ತಿಳಿಸಿದರು.
ಯುಪಿಎ ಸರಕಾರವು ನರೇಗಾ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಂದಿತ್ತು. ಸಾಮಾಜಿಕ ಬದಲಾವಣೆಗೆ ಕಾರಣವಾಗುವ ಯಾವುದಾದರೂ ಒಂದು ಪ್ರಗತಿಪರ ಕಾನೂನು, ಕಾರ್ಯಕ್ರಮವನ್ನು ಮೋದಿ ಸರಕಾರ ಜಾರಿಗೆ ತಂದಿದೆಯೇ? ಎಂದು ಅವರು ಪ್ರಶ್ನಿಸಿದರು.
ಅಂಬೇಡ್ಕರ್ ಬರೆದಿರುವ ಸಂವಿಧಾನ ತೆಗೆಯಬೇಕು, ಹೊಸ ಸಂವಿಧಾನ ರಚಿಸಬೇಕು ಎಂಬುದರ ಬಗ್ಗೆಯೇ ಅವರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ, ನಾವು ಯುವಕರನ್ನು ಸಶಕ್ತರನ್ನಾಗಿಸಲು ಉದ್ಯೋಗ ಸೃಷ್ಟಿ, ಉದ್ಯಮ ಸ್ಥಾಪಿಸಲು ಮುಂದಾಗುವವರಿಗೆ ಬಡ್ಡಿರಹಿತ ಸಾಲ, ಜಿಎಸ್‌ಟಿ ಸರಳೀಕರಣ, ಶಿಕ್ಷಣಕ್ಕಾಗಿ ಜಿಡಿಪಿಯ ಶೇ.6ರಷ್ಟು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಶೇ.3ರಷ್ಟು ವಿನಿಯೋಗಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದ್ದೇವೆ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಸರಕಾರದ ಆಡಳಿತದಲ್ಲಿ ಘಾಸಿಗೊಂಡಿರುವ ದೇಶಕ್ಕೆ ಸಾಂತ್ವನ ಹಾಗೂ ಗುಣಮಪಡಿಸುವ ಕೆಲಸವನ್ನು ಈ ಪ್ರಣಾಳಿಕೆ ಮಾಡುತ್ತದೆ. ಇವರ ಆಳ್ವಿಕೆಯಲ್ಲಿ ಗೋವಿನ ವಿಚಾರದಲ್ಲಿ ಹತ್ಯೆಗಳು, ಅಲ್ಪಸಂಖ್ಯಾತರು, ದಲಿತರ ಮೇಲೆ ಗುಂಪು ಹಲ್ಲೆಗಳು, ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿಗಳು ನಡೆದಿವೆ ಎಂದು ಅವರು ತಿಳಿಸಿದರು. ಸಾಮಾಜಿಕವಾಗಿ ದೇಶಕ್ಕೆ ದೊಡ್ಡ ಪೆಟ್ಟು ಆಗಿದೆ. ಬಡವರು, ರೈತಾಪಿ ವರ್ಗ, ಕಾರ್ಮಿಕರು, ಅಸಂಘಟಿತ ವಲಯದ ಜನರಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ದೇಶವು ಆರ್ಥಿಕ ಸಂಕಷ್ಟದಲ್ಲಿದೆ. ಅದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.
ಪ್ರಧಾನಿ ನರೇಂದ್ರಮೋದಿ ಹಾಗೂ ಅತ್ಯಂತ ನಿರುಪಯುಕ್ತ ವಿತ್ತ ಸಚಿವ ಅರುಣ್ ಜೇಟ್ಲಿಯ ಮೂರ್ಖತನದ ತೀರ್ಮಾನದಿಂದ ಕಳೆದ ಐದು ವರ್ಷಗಳಲ್ಲಿ ದೇಶ ಯಾವ ವೇಗದಲ್ಲಿ ಬೆಳೆಯಬೇಕಿತ್ತೋ, ಅಷ್ಟು ಆಗಿಲ್ಲ. ನೋಟುಗಳ ಅಮಾನ್ಯೀಕರಣ, ಪೂರ್ವ ಸಿದ್ಧತೆಗಳಿಲ್ಲದೆ ಜಿಎಸ್‌ಟಿ ಅನುಷ್ಠಾನದಿಂದ ದೇಶಕ್ಕೆ 4 ಲಕ್ಷ ಕೋಟಿ ರೂ.ನಷ್ಟವಾಗಿದೆ ಎಂದು ಅವರು ಹೇಳಿದರು. ದೇಶದ ಬಾಹ್ಯ ಹಾಗೂ ಆಂತರಿಕ ಭದ್ರತೆ ವಿಚಾರದಲ್ಲಿಯೂ ಮೋದಿ ಸರಕಾರ ವಿಫಲವಾಗಿದೆ. ಜಮ್ಮು ಕಾಶ್ಮೀರದಲ್ಲಿ ಈ ಹಿಂದೆ ಚುನಾವಣೆಯಲ್ಲಿ ಜನ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಆದರೆ, ಇವರ ಆಡಳಿತ ವೈಫಲ್ಯದಿಂದ ಅಲ್ಲಿ ಅಭದ್ರತೆಯ ವಾತಾವರಣ ಹೆಚ್ಚಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬಡವರನ್ನು ಆರ್ಥಿಕವಾಗಿ ಸದೃಢಗೊಳಿಸುವ ‘ನ್ಯಾಯ್’ ಯೋಜನೆಗೆ ಎಲ್ಲಿಂದ ಹಣ ತರುತ್ತಾರೆ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಬಡವರ ಪರವಾಗಿ ಬಿಜೆಪಿಯಿಂದ ಏನು ಮಾಡಲು ಸಾಧ್ಯವಿಲ್ಲವೋ, ಅದನ್ನು ಕಾಂಗ್ರೆಸ್ ಮಾಡಿ ತೋರಿಸುತ್ತದೆ. ಈ ಒಂದು ಯೋಜನೆಯಿಂದ ಬಡವರನ್ನು ಬಡತನದಿಂದ ಮೇಲೆ ತರುವ ಪ್ರಯತ್ನವಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಘೋರ್ಪಡೆ, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಕೆಪಿಪಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ ಮನ್ಸೂರ್ ಖಾನ್ ಉಪಸ್ಥಿತರಿದ್ದರು.







