ಸೌದಿಯ ಅತಿ ದೊಡ್ಡ ತೈಲ ನಿಕ್ಷೇಪದ ಉತ್ಪಾದನೆಯಲ್ಲಿ ತೀವ್ರ ಕುಸಿತ!
ಇದರ ಮೇಲಿತ್ತು ಅಮೆರಿಕ ಸೇನಾ ತಂತ್ರಗಾರರ ಕಣ್ಣು

ನ್ಯೂಯಾರ್ಕ್, ಎ. 3: ಅದು ಸೌದಿ ಅರೇಬಿಯದ ಸರಕಾರಿ ರಹಸ್ಯವಾಗಿತ್ತು ಹಾಗೂ ಆ ದೇಶದ ಸಂಪತ್ತಿನ ಮೂಲವಾಗಿತ್ತು. ಅದು ಎಷ್ಟು ಮಹತ್ವದ್ದಾಗಿತ್ತೆಂದರೆ, ಅದನ್ನು ಹೇಗೆ ಬಲಪ್ರಯೋಗದಿಂದ ವಶಪಡಿಸಿಕೊಳ್ಳುವುದು ಎಂಬ ಬಗ್ಗೆ ಒಮ್ಮೆ ಅಮೆರಿಕದ ಸೇನಾ ತಂತ್ರಗಾರರು ಚರ್ಚಿಸಿದ್ದರು! ತೈಲ ವ್ಯಾಪಾರಸ್ಥರಿಗೆ ಅದು ಕೊನೆಯಿಲ್ಲದ ಊಹಾಪೋಹಗಳ ಮೂಲವಾಗಿತ್ತು.
ಈಗ ಕೊನೆಗೂ ತೈಲ ಮಾರುಕಟ್ಟೆಗೆ ಗೊತ್ತಾಗಿದೆ: ಜಗತ್ತಿನ ಅತಿ ದೊಡ್ಡ ಸಾಂಪ್ರದಾಯಿಕ ತೈಲ ನಿಕ್ಷೇಪ ಸೌದಿ ಅರೇಬಿಯದ ‘ಘವರ್’ ಎಲ್ಲರೂ ಭಾವಿಸಿರುವುದಕ್ಕಿಂತಲೂ ತುಂಬಾ ಕಡಿಮೆ ಪ್ರಮಾಣದ ತೈಲವನ್ನು ಉತ್ಪಾದಿಸುತ್ತದೆ ಎಂದು.
ಸುಮಾರು 40 ವರ್ಷಗಳ ಹಿಂದೆ ರಾಷ್ಟ್ರೀಕರಣಗೊಂಡ ಸೌದಿ ಅರಾಮ್ಕ ಸೋಮವಾರ ಮೊದಲ ಬಾರಿಗೆ ತನ್ನ ಲಾಭದ ಅಂಕಿಸಂಖ್ಯೆಗಳನ್ನು ಪ್ರಕಟಿಸಿದಾಗ, ತನ್ನ ಬೃಹತ್ ತೈಲ ನಿಕ್ಷೇಪಗಳನ್ನು ಆವರಿಸಿದ್ದ ಗೌಪ್ಯತೆಯ ಪರದೆಯನ್ನೂ ಸರಿಸಿತು.
ಘವರ್ ಈಗ ಗರಿಷ್ಠವೆಂದರೆ ದಿನಕ್ಕೆ 38 ಲಕ್ಷ ಬ್ಯಾರಲ್ ತೈಲವನ್ನು ಮಾತ್ರ ಪೂರೈಸಬಹುದಾಗಿದೆ ಎಂದು ಅದು ಹೇಳಿತು. ಇದು ಮಾರುಕಟ್ಟೆಯ ಗರಿಷ್ಠ ಮಿತಿ 50 ಲಕ್ಷ ಬ್ಯಾರಲ್‌ಗಿಂತ ತುಂಬಾ ಕಡಿಮೆಯಾಗಿದೆ.
2017ರಲ್ಲಿ ಘವರ್‌ನ ಉತ್ಪಾದನೆ ದಿನಕ್ಕೆ 58 ಲಕ್ಷ ಬ್ಯಾರಲ್ ಆಗಿತ್ತು ಎಂಬುದಾಗಿ ಅಮೆರಿಕದ ‘ಇಂಧನ ಮಾಹಿತಿ ಸಂಸ್ಥೆ’ ಹೇಳಿತ್ತು.
ಸುಮಾರು 280 ಕಿಲೋಮೀಟರ್ ಉದ್ದದ ಘವರ್ ತೈಲ ನಿಕ್ಷೇಪವು ಎಷ್ಟು ಮಹತ್ವ ಪಡೆದುಕೊಂಡಿತ್ತೆಂದರೆ, ಸೌದಿ ಅರೇಬಿಯದ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಅರ್ಧಕ್ಕಿಂತಲೂ ಹೆಚ್ಚಿನ ಭಾಗವನ್ನು ಅದು ಪೂರೈಸುತ್ತಿತ್ತು.
ಈ ಕ್ಷೇತ್ರವನ್ನು 1948ರಲ್ಲಿ ಅಮೆರಿಕದ ಭೂವಿಜ್ಞಾನಿಯೊಬ್ಬರು ಆವಿಷ್ಕರಿಸಿದ್ದಾರೆ.