ವಿದ್ಯಾರ್ಥಿನಿಯರೇ, ಸ್ನಾನ ಮಾಡಬೇಡಿ, ಬಟ್ಟೆ ತೊಳೆಯಬೇಡಿ!
ಮೈಸೂರು, ಎ.4: ತೀವ್ರ ನೀರಿನ ಸಮಸ್ಯೆ ಬಗೆಹರಿಯುವ ವರೆಗೂ ವಿದ್ಯಾರ್ಥಿನಿಯರು ಸ್ನಾನ ಮಾಡಬೇಡಿ ಮತ್ತು ಬಟ್ಟೆ ತೊಳೆಯಬೇಡಿ ಎಂಬ ಸೂಚನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಹಾಸ್ಟೆಲ್ ನೀಡಿದೆ. ಇದರಿಂದಾಗಿ 800 ವಿದ್ಯಾರ್ಥಿನಿಯರು ಆತಂಕಿತರಾಗಿದ್ದಾರೆ.
ಅರಮನೆ ನಗರಿಯಲ್ಲಿ ಈ ಬಾರಿ ಉಷ್ಣಾಂಶ ಗರಿಷ್ಠ ಮಟ್ಟ ತಲುಪಿದ್ದು, ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಸುಮಾರು ಮೂರು ತಿಂಗಳಿಂದ ವಿವಿ ಕ್ಯಾಂಪಸ್‌ನಲ್ಲಿ ನಳ್ಳಿಗಳು ಒಣಗಿದ್ದು, ಹಾಸ್ಟೆಲ್‌ಗೆ ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮೂಲಭೂತ ಅಗತ್ಯತೆಗಳಿಗೆ ನೀರು ಹಿಡಿಯಲು ವಿದ್ಯಾರ್ಥಿನಿಯರು ಸರದಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ.
ವಿವಿ ಆಡಳಿತದ ಸ್ನಾನ ಮಾಡಬೇಡಿ, ಬಟ್ಟೆ ತೊಳೆಯಬೇಡಿ ಆದೇಶದ ವಿರುದ್ಧ ವಿದ್ಯಾರ್ಥಿನಿಯರು ಸಿಡಿದೆದ್ದಿದ್ದು, ಸೋಮವಾರ ಮಧ್ಯರಾತ್ರಿ ದಿಢೀರ್ ಧರಣಿ ನಡೆಸಿದರು. ತಕ್ಷಣ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
"ವಿದ್ಯುತ್ ವ್ಯತ್ಯಯದಿಂದಾಗಿ ನೀರಿನ ಪಂಪ್ ಕೈಕೊಟ್ಟಿರುವುದರಿಂದ ನೀರಿನ ಸಮಸ್ಯೆ ಉದ್ಭವಿಸಿದೆ. ನಗರದಲ್ಲಿರುವ ನೀರಿನ ಸಮಸ್ಯೆಗೂ, ಇಲ್ಲಿನ ಸಮಸ್ಯೆಗೂ ಸಂಬಂಧ ಇಲ್ಲ. ಕ್ಯಾಂಪಸ್‌ನ ಕೆಲ ಕೊಳವೆಬಾವಿಗಳು ಒಣಗಿರುವುದರಿಂದ ಕ್ಯಾಂಪಸ್‌ಗೆ ನೀರಿನ ಪೈಪ್‌ಲೈನ್ ಅಳವಡಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದೇವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಿಲ್ಲ" ಎಂದು ಕುಲಪತಿ ಜಿ.ಹೇಮಂತಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾರ್ಥಿನಿಯರ ಮಿಂಚಿನ ಮುಷ್ಕರ ಮತ್ತು ನೀರಿನ ತೀವ್ರ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ವಿದ್ಯಾರ್ಥಿನಿಯರು ಮಧ್ಯರಾತ್ರಿ ಹಾಸ್ಟೆಲ್‌ನಿಂದ ಹೊರಬಂದಾಗ ಇದು ಗಮನಕ್ಕೆ ಬಂದಿದೆ. ಮುಂಜಾನೆ 2 ಗಂಟೆ ಸುಮಾರಿಗೆ ವಿದ್ಯಾರ್ಥಿನಿಯರ ಜತೆ ಮಾತನಾಡಿ ತ್ವರಿತವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾಗಿ ಅವರು ಹೇಳಿದ್ದಾರೆ.
ಪದೇ ಪದೇ ವಿದ್ಯುತ್ ಕಡಿತದಿಂದಾಗಿ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ಹಾಸ್ಟೆಲ್‌ನ 2ನೇ ಬ್ಲಾಕ್ ವಾರ್ಡನ್ ಎಂ.ವಸಂತಿ ದೃಢಪಡಿಸಿದ್ದಾರೆ. ಕ್ಯಾಂಪಸ್‌ನಲ್ಲಿ 40 ಕೊಳವೆಬಾವಿಗಳಿದ್ದು, ಈ ಪೈಕಿ 10 ಒಣಗಿವೆ. ಸುಮಾರು 3000 ವಿದ್ಯಾರ್ಥಿಗಳಿರುವ ಕ್ಯಾಂಪಸ್‌ನಲ್ಲಿ ನೀರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಲಾಗಿದೆ. ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿರುವ ಈ ಕ್ಯಾಂಪಸ್‌ಗೆ ಪಾಲಿಕೆಯಿಂದ ನೀರು ಸರಬರಾಜು ವ್ಯವಸ್ಥೆ ಇಲ್ಲ.