ಸಿಖ್ ಸಮುದಾಯದ ಆಕ್ರೋಶ: ರಾಷ್ಟ್ರಪತಿ ಕೋವಿಂದ್ ರ ಸೋಶಿಯಲ್ ಮೀಡಿಯಾ ಖಾತೆಗಳಿಂದ ವೀಡಿಯೋ ಡಿಲೀಟ್

ಹೊಸದಿಲ್ಲಿ, ಎ.4: ಅಕಾಲ್ ತಖ್ತ್, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಹಾಗೂ ಸಿಖ್ ಸಮುದಾಯದ ಹಲವು ಮಂದಿಯ ಆಕ್ಷೇಪದ ಹಿನ್ನೆಲೆಯಲ್ಲಿ ಗುರು ಗ್ರಂಥ್ ಸಾಹಿಬ್ ಆಧರಿತ ‘ಮೂಲ್ ಮಂತರ್’ ಎಂಬ ನೃತ್ಯ ಪ್ರದರ್ಶನದ ವೀಡಿಯೋ ಕ್ಲಿಪ್ ಅನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಸಾಮಾಜಿಕ ಜಾಲತಾಣ ಖಾತೆಗಳಿಂದ ಬುಧವಾರ ಡಿಲೀಟ್ ಮಾಡಲಾಗಿದೆ. ರಾಷ್ಟ್ರಪತಿ ಚಿಲಿ ದೇಶದ ಸಾಂಟಿಯಾಗೋದಲ್ಲಿ ಮಾರ್ಚ್ 31ರಂದು ಭಾಗವಹಿಸಿದ್ದ ಸಮಾರಂಭದಲ್ಲಿ ಈ ನೃತ್ಯ ಪ್ರದರ್ಶನ ನಡೆದಿತ್ತು.
ಬೀಜ್ ಮಂತರ್ ಅಥವಾ ಗುರು ಮಂತರ್ ಎಂದೂ ಕರೆಯಲ್ಪಡುವ ಮೂಲ್ ಮಂತರ್ ಮೂಲತಃ ಗುರು ಗ್ರಂಥ ಸಾಹಿಬ್ ಇದರ ಮೊದಲ ಭಾಗದ ಪ್ರಾರ್ಥನೆ ಜಪ್ಜಿ ಸಾಹಿಬ್ ಆರಂಭದಲ್ಲಿ ಕಾಣಿಸುತ್ತದೆ.
ರಾಷ್ಟ್ರಪತಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ವೀಡಿಯೋ ಕ್ಲಿಪ್ ಅನ್ನು ಎಪ್ರಿಲ್ 1ರಂದು ಸಂಜೆ 7:29ಕ್ಕೆ ಅಪ್ ಲೋಡ್ ಮಾಡಿತ್ತು. ಬುಧವಾರ ಟ್ವೀಟ್ ಹಾಗೂ ಫೇಸ್ ಬುಕ್ ಪೋಸ್ಟ್ ಡಿಲೀಟ್ ಮಾಡಿದ ನಂತರ ರಾಷ್ಟ್ರಪತಿಯ ಮಾಧ್ಯಮ ಕಾರ್ಯದರ್ಶಿ ಅಶೋಕ್ ಮಲಿಕ್ ಟ್ವೀಟ್ ಮಾಡಿ ‘‘ರಾಷ್ಟ್ರಪತಿ ಚಿಲಿ ದೇಶಕ್ಕೆ ಭೇಟಿ ನೀಡಿದ ವೇಳೆ ಸಾಂಟಿಯಾಗೋದ ಭಾರತೀಯ ಸಮುದಾಯದ ಕಾರ್ಯಕ್ರಮಕ್ಕೆ ಅವರಿಗೆ ಆಹ್ವಾನ ನೀಡಲಾಗಿತ್ತು. ಈ ಸಂದರ್ಭ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಕೆಲ ವೀಡಿಯೊಗಳನ್ನು ರಾಷ್ಟ್ರಪತಿಯವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೇರ್ ಮಾಡಲಾಗಿತ್ತು. ಈ ಸಾಂಸ್ಕೃತಿಕ ಕಾರ್ಯಕ್ರಮ ತಯಾರಿಯಲ್ಲಿ ರಾಷ್ಟ್ರಪತಿಯ ಸೆಕ್ರಟೇರಿಯಟ್ ಗೆ ಯಾವುದೇ ಪಾತ್ರವಿಲ್ಲದೇ ಇದ್ದರೂ ಅವುಗಳಲ್ಲಿ ಕೆಲವು ಕೆಲ ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಲಾದ ಹಿನ್ನೆಲೆಯಲ್ಲಿ ಆ ವೀಡಿಯೋಗಳನ್ನು ಡಿಲೀಟ್ ಮಾಡಲಾಗಿದೆ’’ ಎಂದು ಬರೆದಿದ್ದಾರೆ.
ಒಟ್ಟು 1.22 ನಿಮಿಷ ಅವಧಿಯ ಈ ವೀಡಿಯೋ ಕ್ಲಿಪ್ ಗೆ ನೀಡಲಾದ ಶೀರ್ಷಿಕೆಯಲ್ಲಿ ‘‘ಎ ಸೋಲ್ ಫುಲ್ ರೆಂಡಿಷನ್ ಆಫ್ ‘ಇಕ್ ಓಂಕಾರ್ ಸತ್ನಾಂ’ ಎಟ್ ದಿ ಇಂಡಿಯನ್ ಕಮ್ಯುನಿಟಿ ರಿಸೆಪ್ಶನ್ ಇನ್ ಸಾಂಟಿಯಾಗೋ, ಚಿಲಿ’’ ಎಂದು ಬರೆಯಲಾಗಿದೆ.
‘‘ಈ ವೀಡಿಯೋಗಳನ್ನು ರಾಷ್ಟ್ರಪತಿಯ ಪರವಾಗಿ ಯಾರು ಅಪ್ ಲೋಡ್ ಮಾಡಿದ್ದಾರೆಂದು ಕಂಡುಹಿಡಿಯಬೇಕು, ಸಿಖರ ಭಾವನೆಗಳಿಗೆ ಇದರಿಂದ ನೋವುಂಟಾಗಿದೆ ಎಂದು ಅವರಿಗೆ ತಿಳಿದಿರಲಿಕ್ಕಿಲ್ಲ’’ ಎಂದು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಕಾರ್ಯದರ್ಶಿ ರೂಪ್ ಸಿಂಗ್ ಹೇಳಿದ್ದಾರೆ.
‘‘ಮೂಲ್ ಮಂತರ್ ಹಾಡಲು ಅಲ್ಲ. ಸಿಖ್ ನಿಯಮಗಳ ಪ್ರಕಾರ ಇದು (ಮೂಲ್ ಮಂತರ್ ಹಾಡಿಗೆ ನೃತ್ಯ) ಧರ್ಮನಿಂದನೆ’’ ಎಂದು ಭಟಿಂಡಾದ ಕೇಂದ್ರೀಯ ವಿಶ್ವವಿದ್ಯಾನಿಲಯದ ಗುರು ಗೋಬಿಂದ್ ಸಿಂಗ್ ಪೀಠದ ಪ್ರೊಫೆಸರ್ ಹರ್ಪಾಲ್ ಸಿಂಗ್ ಪನ್ನು ಹೇಳಿದ್ದಾರೆ.