ಸಾಮಾಜಿಕ ಮಾಧ್ಯಮಗಳಲ್ಲಿ ಹಿಂಸಾತ್ಮಕ ವೀಡಿಯೊ ನಿಷೇಧ ನಿರ್ಣಯ ಅಂಗೀಕಾರ: ಆಸ್ಟ್ರೇಲಿಯ

ಕ್ಯಾನ್‌ಬೆರ (ಆಸ್ಟ್ರೇಲಿಯ), ಎ. 4: ಹಿಂಸಾತ್ಮಕ ಅಪರಾಧಗಳು ಮತ್ತು ಭಯೋತ್ಪಾದಕ ಕೃತ್ಯಗಳು ಇಂಟರ್‌ನೆಟ್‌ನಲ್ಲಿ ನೇರಪ್ರಸಾರಗೊಳ್ಳುವುದನ್ನು ತಡೆಯುವ ಉದ್ದೇಶದ ಮಸೂದೆಯೊಂದನ್ನು ಆಸ್ಟ್ರೇಲಿಯ ಸೆನೆಟ್ ಅಂಗೀಕರಿಸಿದೆ.
ಅದೇ ವೇಳೆ, ಪ್ರಸ್ತಾಪಿತ ಕಾನೂನಿನಲ್ಲಿ ದೋಷಗಳಿವೆ ಎಂಬುದಾಗಿ ಕಾನೂನು ಪಂಡಿತರು ಮತ್ತು ತಂತ್ರಜ್ಞಾನ ಕಂಪೆನಿಗಳು ಅಭಿಪ್ರಾಯಪಟ್ಟಿವೆ.
ಭಯೋತ್ಪಾದಕರು ಮತ್ತು ಕ್ರಿಮಿನಲ್‌ಗಳು ಸಾಮಾಜಿಕ ಮಾಧ್ಯಮಗಳನ್ನು ‘ಅಸ್ತ್ರವನ್ನಾಗಿ ಬಳಸುವುದನ್ನು’ ತಡೆಯುವ ಉದ್ದೇಶದ ಮಸೂದೆಯು ಬುಧವಾರ ತಡರಾತ್ರಿ ಸಂಸತ್ತಿನ ಮೇಲ್ಮನೆಯಲ್ಲಿ ಅಂಗೀಕಾರಗೊಂಡಿದೆ. ಈ ಸಂದರ್ಭದಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ ಅಥವಾ ತಿದ್ದುಪಡಿಗಳನ್ನು ಮಾಡಲಾಗಿಲ್ಲ.
ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಎರಡು ಮಸೀದಿಗಳಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ ಭಯೋತ್ಪಾದನೆ ದಾಳಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಈ ಮಸೂದೆಯನ್ನು ಅಂಗೀಕರಿಸಿದೆ. ನ್ಯೂಝಿಲ್ಯಾಂಡ್ ದಾಳಿಯಲ್ಲಿ 50 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ತಾನು ನಡೆಸುತ್ತಿರುವ ದಾಳಿಯನ್ನು ದುಷ್ಕರ್ಮಿಯು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಿದ್ದನು. ಇದನ್ನು ಆದಷ್ಟು ಬೇಗನೇ ತೆಗೆದುಹಾಕಲು ವಿಫಲವಾಗಿರುವುದಕ್ಕಾಗಿ ಫೇಸ್‌ಬುಕ್ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿರುವುದನ್ನು ಸ್ಮರಿಸಬಹುದಾಗಿದೆ.
ಹಿಂಸಾತ್ಮಕ ವೀಡಿಯೊಗಳನ್ನು ತಕ್ಷಣ ತಮ್ಮ ಮಾಧ್ಯಮಗಳಿಂದ ತೆಗೆದುಹಾಕಲು ವಿಫಲಗೊಳ್ಳುವ ಸಾಮಾಜಿಕ ಮಾಧ್ಯಮಗಳ ಮೇಲೆ ಅವುಗಳ ವಾರ್ಷಿಕ ವ್ಯವಹಾರದ 10 ಶೇಕಡ ದಂಡ ಹಾಗೂ ಅವುಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವವನ್ನು ಈ ಮಸೂದೆ ಹೊಂದಿದೆ.