ಭಾರತ ಸೃಷ್ಟಿಸಿದ ಬಾಹ್ಯಾಕಾಶ ಅವಶೇಷಗಳು ಸುಟ್ಟುಹೋಗುತ್ತವೆ: ಅಮೆರಿಕದ ರಕ್ಷಣಾ ಇಲಾಖೆ
ವಾಶಿಂಗ್ಟನ್, ಎ. 5: ಭಾರತ ನಡೆಸಿದ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಹುಟ್ಟಿಕೊಂಡ ಅವಶೇಷಗಳು ನಿಧಾನವಾಗಿ ವಾತಾವರಣದಲ್ಲಿ ಸುಟ್ಟುಹೋಗುತ್ತವೆ ಎಂಬ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಗುರುವಾರ ಹೇಳಿದೆ.
ಕಳೆದ ವಾರ ಭಾರತೀಯ ವಿಜ್ಞಾನಿಗಳು 300 ಕಿ.ಮೀ. ಎತ್ತರದಲ್ಲಿರುವ ಭಾರತದ್ದೇ ಆದ ಉಪಗ್ರಹವೊಂದನ್ನು ನಾಶ ಮಾಡುವ ಕ್ಷಿಪಣಿಯೊಂದರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.
ಅದೇ ವೇಳೆ, ಈ ಪರೀಕ್ಷೆಯಿಂದ 400ಕ್ಕೂ ಹೆಚ್ಚು ಅವಶೇಷಗಳು ಕಕ್ಷೆಗೆ ಸೇರ್ಪಡೆಯಾಗಿವೆ ಹಾಗೂ ಅವುಗಳು ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೇಲ್ಭಾಗದಲ್ಲಿ ಸುತ್ತುತ್ತಿವೆ. ಇದು ಅತ್ಯಂತ ಭಯಾನಕ ಸಂಗತಿಯಾಗಿದೆ ಎಂಬುದಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಮುಖ್ಯಸ್ಥ ಜಿಮ್ ಬ್ರೈಡನ್ಸ್ಟೈನ್ ಸೋಮವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ನಾಸಾ ಮುಖ್ಯಸ್ಥರ ಹೇಳಿಕೆಯು ಅಮೆರಿಕದ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನಹನ್ರ ನಿಲುವಿಗಿಂತ ತೀರಾ ಭಿನ್ನವಾಗಿದೆ. ಈ ಅವಶೇಷಗಳು ಬಾಹ್ಯಾಕಾಶದ ಉಪಗ್ರಹಗಳಿಗೆ ಬೆದರಿಕೆಯಾಗಬಹುದು ಎಂಬ ಕಳವಳವನ್ನು ಅವರು ತಳ್ಳಿಹಾಕಿದ್ದರು. ಅವಶೇಷಗಳು ನಿಧಾನವಾಗಿ ವಾತಾವರಣದಲ್ಲಿ ಸುಟ್ಟುಹೋಗುತ್ತದೆ ಎಂದು ಅವರು ಹೇಳಿದ್ದರು.
ಪ್ಯಾಟ್ರಿಕ್ ಶಾನಹನ್ರ ಹೇಳಿಕೆಗೆ ಪೆಂಟಗನ್ ಬದ್ಧವಾಗಿದೆಯೇ ಎಂಬ ಪ್ರಶ್ನೆಗೆ ಗುರುವಾರ ಉತ್ತರಿಸಿದ ವಕ್ತಾರ ಚಾರ್ಲೀ ಸಮ್ಮರ್ಸ್, ‘‘ಹೌದು’’ ಎಂದರು.