ತೆಲುಗುದೇಶಂ ಅಧಿಕಾರಕ್ಕೆ ಬಂದರೆ ಮುಸ್ಲಿಂ ಡಿಸಿಎಂ: ನಾಯ್ಡು

ಹೈದರಾಬಾದ್, ಎ.7: ತೆಲಂಗಾಣ ಸಿಎಂ ಅವವರನ್ನು ಅನುಕರಿಸಲು ಮುಂದಾಗಿರುವ ತೆಲುಗು ದೇಶಂ ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ತೆಲುಗುದೇಶಂ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮುಖಂಡರೊಬ್ಬರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಂತೆಯೇ ಮುಸ್ಲಿಮರಿಗಾಗಿ ಬಡ್ಡಿರಹಿತ ಸಾಲ ಒದಗಿಸುವ ಇಸ್ಲಾಮಿಕ್ ಬ್ಯಾಂಕ್ ಸ್ಥಾಪನೆ ಮಾಡುವುದಾಗಿಯೂ ನಾಯ್ಡು ಆಶ್ವಾಸನೆ ನೀಡಿದ್ದಾರೆ.
ಕರ್ನೂಲು ಜಿಲ್ಲೆಯ ಅಲೂರು ಎಂಬಲ್ಲಿ ನಡೆದ ಚುನಾವಣಾ ಸಭೆಯಲ್ಲಿ ನಾಯ್ಡು ಈ ಘೋಷಣೆ ಮಾಡಿದರು. "ಇಂದು ಪವಿತ್ರ ದಿನ. ಎಲ್ಲರೂ ನಮಾಝ್ ಮಾಡುತ್ತೀರಿ; ನೀವು ಟಿಡಿಪಿಗೆ ಮತ ಹಾಕುವ ನಿರ್ಣಯವನ್ನೂ ಕೈಗೊಳ್ಳಬೇಕು. ರಾಜ್ಯದಲ್ಲಿ ಮುಸ್ಲಿಂ ಉಪಮುಖ್ಯಮಂತ್ರಿಯನ್ನು ಮಾಡುವ ಭರವಸೆಯನ್ನು ನಾನು ಹಾಗೂ ಟಿಡಿಪಿ ನೀಡುತ್ತಿದೆ" ಎಂದು ಹೇಳಿದರು.
ಸದ್ಯ ಸರ್ಕಾರದಲ್ಲಿ ನಾಯ್ಡು, ಕಪು ಸಮುದಾಯ ಮತ್ತು ಹಿಂದುಳಿದ ಸಮುದಾಯಗಳ ಇಬ್ಬರು ಮುಖಂಡರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ತೆಲಂಗಾಣದಲ್ಲಿ ಒಬ್ಬರು ದಲಿತ ಹಾಗೂ ಮತ್ತೊಬ್ಬರು ಮುಸ್ಲಿಂ ಉಪಮುಖ್ಯಮಂತ್ರಿಗಳಿದ್ದಾರೆ.
ಹಿಂದುಳಿದ ವರ್ಗದವರಿಗಾಗಿ ಬಿಸಿ ಬ್ಯಾಂಕ್ ಸ್ಥಾಪನೆಯ ಭರವಸೆಯನ್ನೂ ನಾಯ್ಡು ನೀಡಿದರು. ಈ ಮಧ್ಯೆ ವಾರ್ಷಿಕ ಐದು ಲಕ್ಷ ರೂಪಾಯಿವರೆಗೆ ಆದಾಯ ಇರುವ ಕುಟುಂಬಗಳ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಕಾರ್ಡ್ ನೀಡುವ ಯೋಜನೆಯನ್ನು ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್.ಜಗನ್ಮೋಹನ ರೆಡ್ಡಿ ನೀಡಿದ್ದಾರೆ. ಈ ಯೋಜನೆ ರಾಜ್ಯದ ಶೇಕಡ 75ರಷ್ಟು ಜನರಿಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.







