ಟಿವಿ ಚರ್ಚೆ ವೇಳೆ ಬಿಜೆಪಿ ವಕ್ತಾರನ ಮೇಲೆ ನೀರನ್ನು ಚೆಲ್ಲಿದ ಕಾಂಗ್ರೆಸ್ ವಕ್ತಾರ!
ಆಕ್ರೋಶಕ್ಕೆ ಕಾರಣ ಏನು ಗೊತ್ತೇ?

ಟಿವಿ ನಿರೂಪಕ
ಹೊಸದಿಲ್ಲಿ, ಎ.7: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ರಾಜಕಾರಣಿಗಳು ಪರಸ್ಪರ ತೀವ್ರ ವಾಗ್ದಾಳಿ ನಡೆಸುವುದರಲ್ಲಿ ನಿರತರಾಗಿದ್ದಾರೆ. ಟಿವಿಯ ನೇರ ಪ್ರಸಾರದ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಬಿಜೆಪಿ ವಕ್ತಾರ ಕೆ.ಕೆ. ಶರ್ಮಾ ಅವರ ಮೇಲೆ ನೀರನ್ನು ಚೆಲ್ಲಿರುವ ಘಟನೆ ಶನಿವಾರ ನಡೆದಿದೆ.
ಬಿಜೆಪಿ ವಕ್ತಾರ ಹಲವು ಬಾರಿ ತನಗೆ ‘ದೇಶದ್ರೋಹಿ’ ಎಂದು ಕರೆದಾಗ ಕೆರಳಿದ ಕಾಂಗ್ರೆಸ್ ವಕ್ತಾರ ತನ್ನ ಎದುರಿಗೆ ಗ್ಲಾಸ್ನಲ್ಲಿ ತುಂಬಿಸಿದ್ದ ನೀರನ್ನು ಬಿಜೆಪಿ ವಕ್ತಾರನ ಮೇಲೆ ಎಸೆದುಬಿಟ್ಟರು. ಎಸೆದ ನೀರು ಟಿವಿ ನಿರೂಪಕನ ಜಾಕೆಟ್ ಮೇಲೂ ಬಿತ್ತು. ಒದ್ದೆಯಾದ ಜಾಕೆಟನ್ನು ಬದಲಿಸಿಕೊಂಡು ಬಂದ ಆ್ಯಂಕರ್ ಬಳಿಕ ಕಾರ್ಯಕ್ರಮವನ್ನು ಮುಂದುವರಿಸಿದರು.
ನೀರಿದ್ದ ಗ್ಲಾಸನ್ನು ಎಸೆದ ಪರಿಣಾಮ ಸ್ಟುಡಿಯೋದಲ್ಲಿ ಗಾಜಿನ ತುಂಡುಗಳು ಬಿದ್ದಿದ್ದವು. ಇದರಿಂದ ಯಾರಿಗೂ ಗಾಯವಾಗಿಲ್ಲ.
ತನ್ನ ವರ್ತನೆಗೆ ಕ್ಷಮೆ ಕೋರಬೇಕೆಂದು ಬಿಜೆಪಿ ವಕ್ತಾರ ಕೆಕೆ ಶರ್ಮಾ, ಅಲೋಕ್ ಶರ್ಮಾಗೆ ಒತ್ತಾಯಿಸಿದರು. ಇದೇ ವೇಳೆ ಅಲೋಕ್ ಶರ್ಮಾ ತನಗೆ ದೇಶದ್ರೋಹಿ ಎಂದು ಕರೆದಿರುವುದಕ್ಕೆ ನೀನೇ ಮೊದಲು ಕ್ಷಮೆ ಕೇಳಬೇಕೆಂದು ಪ್ರತಿವಾದಿಸಿದರು.







