ರಿಲಯನ್ಸ್ ಪ್ರವರ್ತಕ ಗುಂಪಿನಿಂದ ಅಕ್ರಮ ಹಣ ವಹಿವಾಟು: ಡಚ್ ತನಿಖಾಧಿಕಾರಿಗಳ ಆರೋಪ

ಮುಂಬೈ, ಎ.7: ರಿಲಯನ್ಸ್ ಗ್ಯಾಸ್ ಟ್ರಾನ್ಸ್‍ಪೋರ್ಟೇಶನ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ ನೀಡಿದ ಸೇವೆಗಳಿಗೆ ಹಾಗೂ ನಿರ್ವಹಿಸಿದ ಕೆಲಸಕ್ಕೆ ಅಧಿಕ ಮೌಲ್ಯದ ಇನ್ ವೈಸ್ ನೀಡುವ ಮೂಲಕ ‘ಎ ಹಕ್ ಎನ್‍ಎಲ್’ ಹೆಸರಿನ ಡಚ್ ಪೈಪ್‍ಲೈನ್ ಕಂಪೆನಿಯೊಂದು 110 ಕೋಟಿ ಡಾಲರ್ ಲಾಭ ಗಳಿಸಿದೆ ಎಂದು ಹಾಲೆಂಡ್ ತನಿಖಾಧಿಕಾರಿಗಳು ಆರೋಪಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಇದನ್ನು ಸಿಂಗಾಪುರ ಮೂಲದ ಬಯೋಮೆಟ್ರಿಕ್ಸ್ ಮಾರ್ಕೆಟಿಂಗ್ ಕಂಪನಿ ಎಂಬ ರಿಲಯನ್ಸ್ ಸಮೂಹದ ಜತೆ ಸಂಪರ್ಕ ಇರುವ ಕಂಪನಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ದೂರಿದ್ದಾರೆ.
ರಿಲಯನ್ಸ್ ಗ್ಯಾಸ್ ಟ್ರಾನ್ಸ್‍ಪೋರ್ಟೇಶನ್ ಇನ್ ಫ್ರಾಸ್ಟ್ರಕ್ಚರ್ ಲಿ. (ಆರ್ ಜಿಟಿಐಎಲ್) ಸಂಸ್ಥೆಯನ್ನು ಇದೀಗ ವೆಸ್ಟ್‍ಕೋಸ್ಟ್ ಪೈಪ್‍ಲೈಲ್ ಲಿಮಿಟೆಡ್ ಎಂದು ಕರೆಯಲಾಗುತ್ತಿದ್ದು, ಇದು ಖಾಸಗಿ ಮಾಲಕತ್ವದ ಸಂಸ್ಥೆಯಾಗಿದೆ.
ಡಚ್ ಸರ್ಕಾರದ ಹಣಕಾಸು ಗುಪ್ತಚರ ಮತ್ತು ತನಿಖಾ ಸೇವೆ ಹಾಗೂ ಆರ್ಥಿಕ ತನಿಖಾ ಸೇವೆಗಳ ಇಲಾಖೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಎ ಹಕ್ ಎನ್‍ಎಲ್ ಸಮೂಹದ ಮೂವರು ಸಿಬ್ಬಂದಿಯನ್ನು ಈ ಸಂಬಂಧ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಆದರೆ ಯಾವುದೇ ಅಕ್ರಮ ನಡೆದಿರುವುದನ್ನು ರಿಲಯನ್ಸ್ ಸಂಸ್ಥೆ ಅಲ್ಲಗಳೆದಿದೆ. ಎ ಹಕ್ ಎನ್‍ಎಲ್ ಕಂಪನಿ ಆರ್‍ಜಿಟಿಐಎಲ್ ಜತೆಗೆ ಭಾರತದಲ್ಲಿ 2006ರಿಂದ 2008ರ ಅವಧಿಯಲ್ಲಿ ಅನಿಲ ಪೈಪ್‍ಲೈನ್ ಕಾಮಗಾರಿ ಕೈಗೊಂಡಿತ್ತು.
ಈ ಅಕ್ರಮದಲ್ಲಿ 1.1 ಶತಕೋಟಿ ಡಾಲರ್ ಮೊತ್ತವನ್ನು ಆರ್ ಜಿಟಿಐಎಲ್ ಗೆ ಸಂಬಂಧಿಸಿದ ಎರಡು ಕಂಪನಿಗಳಲ್ಲಿ "ಬೇರರ್ ಡಾಕ್ಯುಮೆಂಟ್" ವಿಧಾನದ ಮೂಲಕ ಹೂಡಿಕೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ದೂರಿದ್ದಾರೆ.







