ಆಂತರಿಕ ಶತ್ರುಗಳಿಂದ ಪ್ರಜಾಪ್ರಭುತ್ವ ರಕ್ಷಣೆ ವಕೀಲರ ಜವಾಬ್ದಾರಿ: ನ್ಯಾ.ವೀರಪ್ಪ

ಉಡುಪಿ, ಎ. 7: ಬಾಹ್ಯ ಶತ್ರುಗಳಿಂದ ದೇಶವನ್ನು ರಕ್ಷಿಸುವ ಕೆಲಸವನ್ನು ಸೈನಿಕರು ಮಾಡಿದರೆ, ವಕೀಲರು ಸ್ವಾತಂತ್ರ ದೊರೆತ 72 ವರ್ಷಗಳಿಂದ ಈವರೆಗೆ ದೇಶದ ಆಂತರಿಕ ಶತ್ರುಗಳಿಂದ ನಮ್ಮ ನಿಜವಾದ ಸ್ವಾತಂತ್ರವನ್ನು ರಕ್ಷಿಸುವ ಕುರಿತು ಹೋರಾಟ ನಡೆಸುತ್ತಿದ್ದಾರೆ. ದೇಶದ ಪ್ರಜಾಪ್ರಭುತ್ವವನ್ನು ಆಂತರಿಕ ಶತ್ರುಗಳಿಂದ ರಕ್ಷಿಸುವ ಜವಾಬ್ದಾರಿ ವಕೀಲರ ಮೇಲಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಬಿ.ವೀರಪ್ಪ ಹೇಳಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದ ವತಿಯಿಂದ ರವಿವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ನ್ಯಾಯವಾದಿ ಪಿ.ಶಿವಾಜಿ ಶೆಟ್ಟಿ ಸ್ಮಾರಕ ನಾಲ್ಕನೆ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂದಲ್ಲಿ ಅವರು ಮಾತನಾಡುತಿದ್ದರು.
ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆ ಎಂಬುದು ಅತಿ ಅಗತ್ಯ. ಈ ನಿಟ್ಟಿ ನಲ್ಲಿ ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಎಲ್ಲರಿಗೂ ಸಮಾನವಾಗಿ ಒದಗಿಸಿಕೊಡುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.
ಕಾನೂನು ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲಿರುವ ಮೂಲಭೂತ ಸೌಕರ್ಯಗಳನ್ನು ಹಾಗೂ ಎಲ್ಲ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು. ಕಾನೂನು ವಿದ್ಯಾರ್ಥಿಗಳಲ್ಲಿ ಆಸಕ್ತಿ ಎಂಬುದು ಬಹಳ ಮುಖ್ಯ. ಗುಣಮಟ್ಟದ ಕಲಿಕೆಯಿಂದ ಯಶಸ್ವಿ ವಕೀಲರಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಯುವ ವಕೀಲರು, ನ್ಯಾಯಾಧೀಶರು ಹಾಗೂ ಹಿರಿಯ ವಕೀಲರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು. ತಮ್ಮ ಹಿರಿಯ ವಕೀಲರೊಂದಿಗೆ ಅಗತ್ಯ ಇರುವ ವಿಚಾರಗಳ ಚರ್ಚೆ ಮಾಡಿ ಅವರ ಅನುಭವವನ್ನು ಪಡೆದುಕೊಳ್ಳಬೇಕು. ಅಲ್ಲದೆ ತಮ್ಮ ವೃತ್ತಿಗೆ ಬದ್ಧರಾಗಿ ಕೆಲಸ ಮಾಡಬೇಕು. ಕಾನೂನು ವೃತ್ತಿಯು ಬಹಳ ಉತ್ತಮ ವೃತ್ತಿಯಾಗಿದ್ದು, ಸಮಾಜದಲ್ಲಿ ಇದಕ್ಕೆ ಉತ್ತಮ ಮಾನ್ಯತೆ ಇದೆ. ಸಾಕಷ್ಟು ವಕೀಲರು ಇಂದು ಉತ್ತಮ ರಾಜಕಾರಣಿಗಳಾಗಿದ್ದಾರೆ ಎಂದರು.
ಯುವ ವಕೀಲರು ಜ್ಞಾನದ ಹಸಿವು, ಸಹಾಯಸ್ತ, ಸರಳತೆ, ಜವಾಬ್ದಾರಿ, ನಿಷ್ಠೆಯನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಅದೇ ರೀತಿ ದೈವ ಪ್ರೀತಿ, ಪಾಪ ಭೀತಿ, ಸಂಘ ನೀತಿಯನ್ನು ಜೀವನದಲ್ಲಿ ಪಾಲಿಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಮಂಗಳೂರಿನ ಹಿರಿಯ ನ್ಯಾಯವಾದಿ ಎಂ.ವಿ.ಶಂಕರ್ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಕಾನೂನು ವಿವಿಯ ನಿವೃತ್ತ ಉಪಕುಲಪತಿ ಡಾ.ಟಿ.ಆರ್.ಸುಬ್ರಹ್ಮಣ್ಯ, ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯವಾದಿ ಎಸ್.ವಿಶ್ವಜೀತ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಜಯಂತಿ ಪಿ.ಶಿವಾಜಿ ಶೆಟ್ಟಿ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ಆನಂದ ಮಡಿವಾಳ, ಕಾರ್ಯಕ್ರಮ ಸಂಯೋಜಕಿ ಡಾ.ನಿರ್ಮಲ ಕುಮಾರಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶು ಪಾಲ ಪ್ರೊ.ಪ್ರಕಾಶ್ ಕಣಿವೆ ಸ್ವಾಗತಿಸಿದರು. ಮೆದಿನಿ ರಾವ್ ವಂದಿಸಿದರು. ಸುಚೇತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.







