ಮತದಾರರು ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸಬೇಕು: ಬಿ.ಕೆ ಹರಿಪ್ರಸಾದ್
ಬಿಟಿಎಂ ಲೇಔಟ್, ಜಯನಗರ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ

ಬೆಂಗಳೂರು, ಎ.7: ರಾಜ್ಯದ ಮತದಾರರು ಕೋಮುವಾದಿ ಶಕ್ತಿ ಬಿಜೆಪಿಯನ್ನು ತಿರಸ್ಕರಿಸುವ ಮೂಲಕ ದೇಶದ ಅಭಿವೃದ್ದಿಗಾಗಿ ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಕರೆ ನೀಡಿದರು.
ರವಿವಾರ ನಗರದ ಬಿಟಿಎಂ ಲೇಔಟ್ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ದೇಶಕ್ಕೆ ಅಪಾಯಕಾರಿಯಾಗಿರುವ ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸುವ ಸಮಯ ಬಂದಿದೆ. ಇದನ್ನು ಮತದಾರರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕೇವಲ ಧರ್ಮದ ಆಧಾರದ ಮೇಲೆ ಮತ ಕೇಳುತ್ತಿರುವ ಬಿಜೆಪಿ ದೇಶಕ್ಕೆ ತಾನು ಮಾಡಿರುವ ಹಾನಿಗಳನ್ನು ಮರೆಮಾಚುತ್ತಿದೆ. ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಮೋದಿ ಆಡಳಿತದಲ್ಲಿ ಬಂಡವಾಳಶಾಹಿಗಳು ಮಾತ್ರ ಅಭಿವೃದ್ದಿಯಾಗಿದ್ದು, ಜನ ಸಾಮಾನ್ಯರ ಬಗ್ಗೆ ಕನಿಷ್ಟ ಕಾಳಜಿಯೂ ಇಲ್ಲವಾಗಿದೆ. ಇಂತಹ ಶಕ್ತಿಗಳನ್ನು ಮಟ್ಟಹಾಕಲು ಸರಿಯಾದ ಸಮಯ ಬಂದಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ದೇಶದ ಅಭಿವೃದ್ದಿಗೆ ಸಾತ್ ನೀಡಿ ಎಂದು ಅವರು ಮನವಿ ಮಾಡಿದರು.
ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳಲ್ಲಿ ಯಾವುದೇ ಗೊಂದಲವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದೇವೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದೇವೆ ಎಂದರು.
ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಾವು ನಮ್ಮ ಚುನಾವಣಾ ಪ್ರಚಾರವನ್ನು ಬಿರುಸುಗೊಳಿಸಿದ್ದೇವೆ. ನಮ್ಮ ಅಭ್ಯರ್ಥಿಯಾಗಿರುವ ಬಿ.ಕೆ.ಹರಿಪ್ರಸಾದ್ ಗೆಲವು ನಿಶ್ಚಿತ ಎಂದರು.
ರವಿವಾರ ಬೆಳಗ್ಗಿನಿಂದಲೆ ಬಿರುಸಿನ ಪ್ರಚಾರ ಕೈಗೊಂಡ ಬಿ.ಕೆ.ಹರಿಪ್ರಸಾದ್ ಎಚ್ ಎಸ್‌ಆರ್ ಲೇಔಟ್‌ನ ಅಗರ ಕೆರೆ, ಸೆಂಟ್ ಥಾಮಸ್ ಫೆರೋನ್ ಚರ್ಚ್‌ಗೆ ಭೇಟಿ ನೀಡಿ ಮತಯಾಚಿಸಿದರು. ಗುರಪ್ಪನ ಪಾಳ್ಯ, ಮದರ್ ಸಾಬ್ ಲೇಔಟ್, ನಾರಾಯಣಪ್ಪ ಗಾರ್ಡ್‌ನ್, ನಿಮಾನ್ಸ್ ಲೇಔಟ್, ಅರಸು ಕಾಲೋನಿ, ಕಾರ್ಪೋರೇಷನ್ ಕಾಲೋನಿ, ಇಂದಿರಾಗಾಂಧಿ ಸ್ಲಮ್, ಪುಟ್ಟೇನಪಾಳ್ಯ, ಲಕ್ಕಸಂದ್ರ, ಚಂದ್ರಪ್ಪನಗರ, ಮಹಾಲಿಂಗೇಶ್ವರ ಲೇಔಟ್, ಆಡುಗೋಡಿ, ಕೋರಮಂಗಲ, ರಾಜೇಂದ್ರ ನಗರ, ಈಜಿಪುರ, ಮಡಿವಾಳ, ಸಿದ್ದಾರ್ಥ ಕಾಲೋನಿ ಸೇರಿದಂತೆ ಹಲವಾರು ಪ್ರದೇಶಗಳಲಿ ರೋಡ್ ಶೋ ನಡೆಸಿದರು.






.jpg)

