ಕರಾವಳಿಯಲ್ಲಿ ಮೈತ್ರಿ ಮಧ್ಯೆ ಗೊಂದಲ ಇಲ್ಲ: ಕುಮಾರಸ್ವಾಮಿ

ಉಡುಪಿ, ಎ.7: ರಾಜ್ಯದ ಉಳಿದೆಡೆಗಳಲ್ಲಿ ನಮ್ಮ ನಡುವೆ ಸಣ್ಣಪುಟ್ಟ ಭಿನ್ನಾಭಿ ಪ್ರಾಯಗಳಿರಬಹುದು. ಇವುಗಳನ್ನೆಲ್ಲಾ ಬಗೆಹರಿಸಿಕೊಂಡು ನಾವು 22ರಿಂದ 23 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ. ಆದರೆ ದ.ಕ., ಉಡುಪಿ ಹಾಗೂ ಉ.ಕ.ದ ಕರಾವಳಿ ಭಾಗದಲ್ಲಿ ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ. ಇಲ್ಲಿನ ಮೈತ್ರಿ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕಾಗಿ ಉಡುಪಿಗೆ ಆಗಮಿಸಿದ ಅವರು ರವಿವಾರ ಇದೇ ಮೊದಲ ಬಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತಿದ್ದರು.
ಕರಾವಳಿ ಭಾಗದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಇಲ್ಲ. ಇಲ್ಲಿ ಗೆಲ್ಲಬೇಕಾದರೆ ಕಾಂಗ್ರೆಸ್‌ನವರ ಸಹಾಯ ನಮಗೆ ಬೇಕು. ಈ ಮೂಲಕ ಪಕ್ಷದ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.
ಚುನಾವಣೆಯ ಬಳಿಕ ತಿಂಗಳಿಗೆ ಕನಿಷ್ಠ 10 ದಿನಗಳಾದರೂ ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳನ್ನು ಕರೆದೊಯ್ದು ಜನರ ಅಹವಾಲು ಸ್ವೀಕರಿಸಲಿದ್ದೇವೆ ಎಂದು ಹೇಳಿದ ಕುಮಾರಸ್ವಾಮಿ, 12 ವರ್ಷಗಳ ಹಿಂದೆ ನಾನಿದನ್ನು ಮಾಡಿದ್ದೆ. ಚುನಾವಣೆ ಬಳಿಕ ಅದೇ ಪ್ರಯೋಗವನು್ನ ಮತ್ತೆ ನಡೆಸುತ್ತೇನೆ ಎಂದರು.
ಬಿಜೆಪಿ, ವಿರೋಧ ಪಕ್ಷಗಳನ್ನು ಕಿಚಡಿ ಪಕ್ಷ ಎನ್ನುತ್ತದೆ. ಹಾಗಿದ್ದರೆ ಇವರೇಕೆ 13 ಪಕ್ಷಗಳನ್ನು ಸೇರಿಸಿಕೊಂಡು ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಧರ್ಮದ ಹೆಸರಿನಲ್ಲಿ ಬಿಜೆಪಿಯವರು ಜನರ ಮಧ್ಯ ಅಂತರ ಸೃಷ್ಟಿಸಿ ಲಾಭ ಪಡೆಯುತ್ತಿಲ್ಲವೇ ಎಂದರು. ಇವರಿಂದ ಕರಾವಳಿಗೆ ಏನು ಕೊಡುಗೆ ಇದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಜತೆ ಸಂಘರ್ಷ, ಆಂತರಿಕ ಸಂಘರ್ಷವೂ ಇದ್ದಿರಲಿಲ್ಲ ಎಂದರು.
ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ನಾಯಕರಾದ ಆಸ್ಕರ್ ಫೆರ್ನಾಂಡಿಸ್, ಬ್ಲೋಸಂ ಫೆರ್ನಾಂಡಿಸ್, ಸಚಿವೆ ಜಯಮಾಲಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಎಸ್.ಎಲ್.ಬೋಜೇಗೌಡ, ಮಾಜಿ ಸಚಿವ ವಿನಯ ಕುಮಾರ ಸೊರಕೆ, ಮಾಜಿ ಶಾಸಕ ಯು.ಆರ್.ಸಭಾಪತಿ, ಎಚ್.ಗೋಪಾಲ ಭಂಡಾರಿ, ನಾಯಕ ರಾಕೇಶ್ ಮಲ್ಲಿ ಮೊದಲಾದವರು ಉಪಸ್ಥಿತರಿದ್ದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಕಾರ್ಯಕ್ರಮ ನಿರ್ವಹಿಸಿದರು.







